

ಶೃಂಗೇರಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ತಾಲೂಕು ಬಿಜೆಪಿ ಘಟಕದ ಕಾರ್ಯಕರ್ತರು ಸೋಮವಾರ ಬಸ್‌ನಿಲ್ದಾಣದಿಂದ ಕಟ್ಟೇಬಾಗಿಲುವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಟ್ಟೇಬಾಗಿಲಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ತಮ್ಮ ಬದುಕು ಕಟ್ಟಿಕೊಳ್ಳಲು ರಿಕ್ಷಾ ಓಡಿಸುವ ಚಾಲಕರು ಹಾಗೂ ಬಾಡಿಗೆ ವಾಹನ ಚಾಲಕರ ಜೀವನವನ್ನು ಅತಂತ್ರ ಸ್ಥಿತಿಗೆ ದೂಡಿದ ಸರ್ಕಾರ ಬಡವರ ಪರವಾಗಿ ಕಾರ್ಯನಿರ್ವಹಿಸಲು ಸೋತಿದೆ ಎಂದು ದೂರಿದರು.
ಬಿಜೆಪಿ ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್ ಮಾತನಾಡಿ, ವಾಲ್ಮೀಕಿ ನಿಗಮ ಮಂಡಳಿ ಮತ್ತು ಪ.ಜಾತಿ ಹಾಗೂ ಪಂಗಡದವರ ಅನುದಾನವನ್ನು ದುರ್ಬಳಕೆ ಮಾಡಿ ಅದನ್ನು ಇನ್ಯಾವುದೋ ಕಾರ್ಯಗಳಿಗೆ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ. ಕೇವಲ ಗ್ಯಾರಂಟಿ ಯೋಜನೆಗೆ ಒತ್ತು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಜನಪರ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದರು.
ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನೂತನ್ ಕುಮಾರ್, ಎಚ್.ಎಸ್.ವೇಣುಗೋಪಾಲ್, ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ, ಪಪಂ ಸದಸ್ಯರಾದ ಹರೀಶ್ ವಿ.ಶೆಟ್ಟಿ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಾ ನಾಗೇಂದ್ರ, ತಾಪಂ ಮಾಜಿ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್, ಸದಸ್ಯ ಕೆ.ಎಸ್.ರಮೇಶ್ ಇತರರಿದ್ದರು.