

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೆ ೖಜ್ ಸುಂಕವನ್ನು ಕೇಂದ್ರ ಸರ್ಕಾರ ಪ್ರತಿ ಲೀಟರ್ಗೆ 2 ರೂ.ನಷ್ಟು ಹೆಚ್ಚಿಸಿದೆ. ಆದರೆ ಇದರ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ. ತೈಲ ಕಂಪನಿಗಳು ಈ ಆರ್ಥಿಕ ಹೊರೆಯನ್ನು ಅಂತಾರಾಷ್ಟ್ರೀಯ ತೈಲ ಬೆಲೆಯ ಏರಿಳಿತ ಗಮನದಲ್ಲಿ ಇಟ್ಟುಕೊಂಡು ನಿಭಾಯಿಸಲಿವೆ.
ಪೆಟ್ರೋಲ್ ಮೇಲೆ ಲೀಟರ್ಗೆ 11 ರೂ. ಇದ್ದ ವಿಶೇಷ ಹೆಚ್ಚುವರಿ ಎಕ್ಸೈಜ್ ಸುಂಕವನ್ನು 13 ರೂ.ಗೆ ಏರಿಸಲಾಗಿದೆ. ಡೀಸೆಲ್ ಮೇಲೆ 8 ರೂ. ಇದ್ದದ್ದನ್ನು 10 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಪೆಟ್ರೋಲ್ ಮೇಲೆ ಕೇಂದ್ರ ವಿಧಿಸುತ್ತಿರುವ ತೆರಿಗೆ ಪ್ರಮಾಣ ಲೀಟರ್ಗೆ 19.9 ರೂ. ಇದ್ದದ್ದು 21.9 ರೂ.ಗೆ ಏರಿದೆ. ಇದರಲ್ಲಿ 1.40 ರೂ. ಮೂಲ ಎಕ್ಸೈಜ್ ಸುಂಕ, 13 ರೂ. ವಿಶೇಷ ಹೆಚ್ಚುವರಿ ಎಕ್ಸೈಜ್ ಸುಂಕ, 2.50 ರೂ. ಕೃಷಿ ಸೆಸ್, 5 ರೂ. ರಸ್ತೆ-ಮೂಲಸೌಕರ್ಯ ಸೆಸ್ ಸೇರಿವೆ.
ಡೀಸೆಲ್ ಮೇಲಿದ್ದ ಎಕ್ಸೈಜ್ ಸುಂಕವನ್ನು ಲೀಟರ್ಗೆ 15.80 ರೂ. ಇದ್ದದ್ದು 17.80 ರೂ.ಗೆ ಏರಿಸಲಾಗಿದೆ. ಇದರಲ್ಲಿ 1.80 ರೂ. ಮೂಲ ಎಕ್ಸೈಜ್ ಸುಂಕ, 10 ರೂ. ವಿಶೇಷ ಹೆಚ್ಚುವರಿ ಎಕ್ಸೆ ೖಜ್ ಸುಂಕ, 4 ರೂ. ಕೃಷಿ ಸೆಸ್, 2 ರೂ. ರಸ್ತೆ-ಮೂಲಸೌಕರ್ಯ ಸುಂಕ ಸೇರಿವೆ. ದೇಶದಲ್ಲಿ ವರ್ಷಕ್ಕೆ 16 ಸಾವಿರ ಕೋಟಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಾಗುತ್ತಿದ್ದು, 2 ರೂ. ಸುಂಕ ಹೆಚ್ಚಳದಿಂದ ಸರ್ಕಾರಕ್ಕೆ 32 ಸಾವಿರ ಕೋಟಿ ರೂ. ಆದಾಯ ದೊರೆಯಲಿದೆ. ಇದು ಮಂಗಳವಾರದಿಂದ ಜಾರಿಗೆ ಬರಲಿದೆ.