ಪೆಟ್ರೋಲ್ ಬೆಲೆ ಏರಿಕೆ; ಕಾಂಗ್ರೆಸ್ ಸರಣಿ ಪ್ರತಿಭಟನೆ

IMG_3523
Published on

ಶಿವಮೊಗ್ಗ: ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್‌ಗಳ ಎದುರು ಸರಣಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ, ಯುವ ಕಾಂಗ್ರೆಸ್, ಎಂಎಲ್‌ಸಿ, ಮಾಜಿ ಶಾಸಕರು, ಕಾರ್ಪೊರೇಟರ್‌ಗಳನ್ನು ಒಳಗೊಂಡಂತೆ ಹಲವು ನಾಯಕರ ನೇತೃತ್ವದಲ್ಲಿ ಪ್ರಮುಖ ಪೆಟ್ರೋಲ್ ಬಂಕ್‌ಗಳ ಎದುರು ತಟ್ಟೆ ಬಾರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುವೆಂಪು ರಸ್ತೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ವಿನೋಬನಗರದಲ್ಲಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಬಿ.ಎಚ್.ರಸ್ತೆಯಯಲ್ಲಿ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವ, ಹೊಳೆ ಬಸ್ ನಿಲ್ದಾಣದ ಎದುರು ಯುವ ಕಾಂಗ್ರೆಸ್‌ನಿಂದ ಹತ್ತಾರು ಕಾರ್ಯಕರ್ತರು ಧರಣಿ ನಡೆಸಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರದಿಂದ ಮೂರು ದಿನ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ದಿನದಿಂದ ದಿನಕ್ಕೆ ತೈಲ ಬೆಲೆ ಗಗನಕ್ಕೇರುತ್ತಿರುವುದನ್ನು ಖಂಡಿಸಿ ಕಿಡಿಕಾರಿದರು.

ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್‌ನಿಂದ ಹೊಳೆ ಬಸ್‌ಸ್ಟಾಪ್ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ಕರೊನಾ ಸಂಕಷ್ಟದ ನಡುವೆಯೂ ತೈಲ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net