

ಬೆಂಗಳೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯದ ನೀರನ್ನು ಬೇರೆ ಕಡೆ ಹರಿಸುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ಎಲ್. ರಮೇಶ್ ಸೇರಿ 8 ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಬೋರನಕಣಿವೆ ಜಲಾಶಯವನ್ನು 1892ರಲ್ಲಿ ಮೈಸೂರು ಮಹಾರಾಜರು ಕಟ್ಟಿಸಿದ್ದರು. ರಾಜ್ಯದ ಮೊದಲ ಜಲಾಶಯ ಎಂಬ ಹೆಗ್ಗಳಿಕೆ ಪಡೆದಿದೆ. 2,269 ದಶ ಲಕ್ಷ ಘನ ಅಡಿ ನೀರಿನ ಸಂಗ್ರಹ ಸಾರ್ಮಥ್ಯವಿರುವ ಈ ಜಲಾಶಯವು, 330 ಚದರ ಮೈಲಿ ಜಲಾಯನ ಪ್ರದೇಶವನ್ನು ಹೊಂದಿದೆ. ಹೆಚ್ಚುವರಿ ನೀರನ್ನು ಬೇರೆ ಹರಿಸಿದರೆ ಸ್ಥಳೀಯರಿಗೆ ತೊಂದರೆ ಉಂಟಾಗಲಿದೆ ಎಂದು ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ನೀರು ಅಭಿವೃದ್ಧಿ ಇಲಾಖೆ ಮತ್ತದರ ಸಹಾಯಕ ಕಾರ್ಯಕಾರಿ ಎಂಜಿನಿಯರ್, ತುಮಕೂರು ಜಿಲ್ಲಾಧಿಕಾರಿ, ತಿಪಟೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ಮತ್ತು ಚಿಕ್ಕನಾಯಕನಹಳ್ಳಿ ತಹಸೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಿದೆ.