ಪೆರೋಲ್‌ಗೆ ಆಕ್ಷೇಪಣೆ ಪ್ರಶ್ನಿಸಿ ಅರ್ಜಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

highcourt
Published on

 ಬೆಂಗಳೂರು: ಅಪರಾಧಿಗಳು ಜೈಲಿನಲ್ಲಿ ಎಸಗುವ ತಪ್ಪುಗಳಿಗೆ ಹಾಗೂ ಅಲ್ಲಿ ನೀಡಲಾಗುವ ಶಿಕ್ಷೆ ಆಕ್ಷೇಪಿಸಿ ಅವರು ಸಲ್ಲಿಸುವ ಜಾಮೀನು ಅರ್ಜಿ ಅಥವಾ ಮೇಲ್ಮನವಿ ವಿಚಾರಣೆಗೆ ಬಾಕಿ ಇದ್ದಾಗ ಪೆರೋಲ್ ಮನವಿ ಪರಿಗಣಿಸಬಾರದು ಎಂಬ ನಿಯಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ವಿಚಾರವಾಗಿ ಹೈಕೋರ್ಟ್‌ನ ಕಾನೂನು ಸೇವಾ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ, ಗೃಹ ಇಲಾಖೆ, ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು.15ಕ್ಕೆ ಮುಂದೂಡಿತು.

ವೈಯುಕ್ತಿಕ ಹಿತಾಸಕ್ತಿ ಬಳಸಿಕೊಳ್ಳುವ ಸಾಧ್ಯತೆ

ಅಪರಾಧಿಗಳು ಜೈಲಿನಲ್ಲಿ ಇದ್ದಾಗ ಎಸಗುವ ತಪ್ಪುಗಳಿಗೆ ಒಂದಿಷ್ಟು ಶಿಕ್ಷೆಗಳನ್ನು ವಿಧಿಸಬೇಕೆಂದು ಕರ್ನಾಟಕ ಕಾರಾಗೃಹ ಕಾಯ್ದೆ-1963ರ ಸೆಕ್ಷನ್ 46ರಿಂದ 49ರವರೆಗೆ ಹೇಳಲಾಗಿದೆ. ಜೈಲುಗಳಲ್ಲಿ ತಪ್ಪು ಮಾಡುವ ಅಪರಾಧಿಗಳಿಗೆ ಕನಿಷ್ಠ ಏಳು ದಿನ ಕಠಿಣ ಕೆಲಸ ಮಾಡಿಸಬೇಕು, ಪೆರೋಲ್, ತಾತ್ಕಾಲಿಕ ಬಿಡುಗಡೆಯ ಹಕ್ಕುಗಳನ್ನು ನಿರಾಕರಿಸಬೇಕು, ಕನಿಷ್ಠ 2 ತಿಂಗಳು ಅವರನ್ನು ಪ್ರತ್ಯೇಕವಾಗಿ ಇರಿಸಬೇಕು ಎಂದು ಹೇಳಲಾಗಿದೆ. ಆದರೆ, ಶಿಕ್ಷೆ ವಿಧಿಸಲು ಅನುಸರಿಸುವ ವಿಧಾನಗಳ ಬಗ್ಗೆ ಕಾಯ್ದೆಯಲ್ಲಿ ಹೇಳಲಾಗಿಲ್ಲ. ಹೀಗಾಗಿ ಜೈಲು ಅಧಿಕಾರಿಗಳು ಈ ಅವಕಾಶವನ್ನು ಮನಬಂದಂತೆ ಪಕ್ಷಪಾತವಾಗಿ, ಪ್ರತಿಕಾರಕ್ಕಾಗಿ, ಪೂರ್ವಾಗ್ರಹವಾಗಿ, ದ್ವೇಷದಿಂದ ಅಥವಾ ವೈಯುಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net