

ಭದ್ರಾವತಿ: ಒಂದರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಲ್ಪೆಂಡಜೋಲ್ ಮಾತ್ರೆಗಳನ್ನು ಪ್ರತಿ 6 ತಿಂಗಳಿಗೆ ಒಮ್ಮೆ ನೀಡುವ ಮೂಲಕ ಪರಾವಲಂಬಿ ಹೊಟ್ಟೆ ಹುಳುಗಳ ಬಾಧೆ ತಪ್ಪಿಸಿ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಆಗದಂತೆ ತಡೆಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಹೇಳಿದರು.
ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕಸಾಪ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಜಂತುಹುಳುಗಳ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಸುಶೀಲಾಬಾಯಿ ಮಾತನಾಡಿ, ಡಿ.9ರಂದು ದೇಶದಾದ್ಯಂತ ಜಂತುಹುಳು ಮಾತ್ರೆ ನೀಡುವ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ 91,191 ಮಕ್ಕಳಿಗೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ. ಎಲ್ಲ ಶಾಲಾ, ಕಾಲೇಜು ಮಕ್ಕಳಿಗೂ ನೀಡಲಾಗುತ್ತಿದೆ. ಶಾಲೆಗೆ ಹೋಗದ ಮಕ್ಕಳಿಗೆ ಆಯಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ನೀಡಲಿದ್ದಾರೆ ಎಂದರು.
ಬಿಇಒ ಎ.ಕೆ.ನಾಗೇಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪ್ರೇಮಾ, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಇತರರಿದ್ದರು.