ಪುಸ್ತಕ ಓದಿನಿಂದ ವ್ಯಕ್ತಿತ್ವ ವಿಕಸನ

anr
ಆಯನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ನಾ ಮೆಚ್ಚಿದ ಪುಸ್ತಕ ಕಾರ್ಯಕ್ರಮದಲ್ಲಿ ಡಾ. ಗಣಪತಿ ಉತ್ತುಂಗ, ಪ್ರಾಚಾರ್ಯ ಡಾ. ಗಣೇಶ್ ಭಟ್, ಡಾ. ಬಿ.ಪಿ.ಮಹದೇವ್, ರೋಹನ್ ಡಿಕಾಸ್ಟ, ವಿದ್ಯಾ ಸರಸ್ವತಿ ಇತರರಿದ್ದರು.
Published on

ಆಯನೂರು: ಪುಸ್ತಕಗಳ ಓದುವಿಕೆ ವಿದ್ಯಾರ್ಥಿಗಳ ವೈಚಾರಿಕತೆ ಹೆಚ್ಚಿಸುವ ಜತೆಗೆ ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಗಣಪತಿ ಉತ್ತುಂಗ ಹೇಳಿದರು.

ಆಯನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಓ ನನ್ನ ಚೇತನ ವೇದಿಕೆ ಹಮ್ಮಿಕೊಂಡಿದ್ದ ನಾ ಮೆಚ್ಚಿದ ಪುಸ್ತಕ-ವಿದ್ಯಾರ್ಥಿಗಳ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಹಾಗೂ ಪುಸ್ತಕದ ಓದು ಅಲ್ಪಮಾನವನಿಂದ ವಿಶ್ವಮಾನವನನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇನ್ನಿತರ ತಾಂತ್ರಿಕ ಉಪಕಾರಣಗಳ ಗೀಳಿಗೆ ಒಳಗಾಗದೆ ಅದರ ಸದ್ಬಳಕೆಯನ್ನು ಮಾತ್ರ ಮಾಡಿಕೊಳ್ಳಬೇಕು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಅಕ್ಷತಾ ಹುಂಚದಕಟ್ಟೆ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಅಭಿವ್ಯಕ್ತಿಯನ್ನು ಹೆಚ್ಚಿಸುವ ಜತೆಗೆ ಅವರನ್ನು ಸಂವೇದನಾಶೀಲರನ್ನಾಗಿಸಲು ಸಹಾಯ ಮಾಡುತ್ತದೆ. ಒಂದು ಉತ್ತಮ ಪುಸ್ತಕ ಹಲವಾರು ಉತ್ತಮ ಗೆಳೆಯರಿಗಿಂತ ಮೇಲು. ವಿದ್ಯಾರ್ಥಿಗಳು ವಿಮರ್ಶಾತ್ಮಕ, ವಿಶ್ಲೇಷಣಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಆಗ ಜಾತಿ, ಮತ, ಧರ್ಮ, ಮೇಲು-ಕೀಳು ಮತ್ತಿತರ ಸಂಕೋಲೆಗಳಿಂದ ಹೊರಬರಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ತಾವು ಓದಿದ ಪುಸ್ತಕಗಳ ಕುರಿತು ವಿಷಯ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಚಾರ್ಯ ಡಾ. ಗಣೇಶ್ ಭಟ್, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಪಿ.ಮಹಾದೇವ್, ಡಾ. ಬಿ.ಪಿ.ಹಿರಿಯಪ್ಪ, ಡಾ. ನಿಜಾಮುದ್ದೀನ್, ಡಾ. ವಿದ್ಯಾ ಸರಸ್ವತಿ, ರೋಹನ್ ಡಿಕಾಸ್ಟ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net