

ಬಂಟ್ವಾಳ: ಭಂಡಾರಿಬೆಟ್ಟುವಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ರೌಡಿಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಹಣಕಾಸು ಹಾಗೂ ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ ಎಂಬಾತ ನೀರುಮಾರ್ಗ ನಿವಾಸಿ ಗಿರೀಶ್ ಜತೆ ಸೇರಿ ಹತ್ಯೆ ನಡೆಸಿದ್ದ. ಗಿರೀಶ್ ಇತ್ತೀಚೆಗೆ ಹತ್ಯೆಯಾದ ರೌಡಿಶೀಟರ್ ಕಿಶನ್ ಹೆಗ್ಡೆ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ. ಬಂಧಿತ ಸತೀಶ್ ಕುಲಾಲ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಪ್ರದೀಪ್ ಕುಮಾರ್ ಅಲಿಯಾಸ್ ಪಪ್ಪು, ಶರೀಫ್ ಅಲಿಯಾಸ್ ಸೈಯ್ಯದ್ ಶರೀಫ್, ವೆಂಕಪ್ಪ ಪೂಜಾರಿ ಅಲಿಯಾಸ್ ವೆಂಕಟೇಶ್ ಮತ್ತು ಬೆಂಗಳೂರು ಜೈಲಿನಲ್ಲಿರುವ ಆಕಾಶಭವನ ಶರಣ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾಗಿ ಬಾಯ್ಬಿಟ್ಟಿದ್ದಾನೆ.ಈ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರದೀಪ್ ಕುಮಾರ್ ತನ್ನ ಚಿನ್ನದ ಅಂಗಡಿಗಾಗಿ ಈ ಹಿಂದೆ ಸುರೇಂದ್ರನಿಂದ ಹಣ ಪಡೆದಿದ್ದ. ಅದರಲ್ಲಿ 7ಲಕ್ಷ ರೂ. ವಾಪಸ್ಸು ನೀಡಲು ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ಸುರೇಂದ್ರ ಹತ್ಯೆಗೆ ಆಕಾಶ್‌ಭವನ ಶರಣ್‌ಗೆ ಆತನ ಪರಿಚಿತ ವ್ಯಕ್ತಿ ಮೂಲಕ 2ಲಕ್ಷ ರೂ.ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ವೆಂಕಪ್ಪ ಪೂಜಾರಿ ಕೂಡ ಸುರೇಂದ್ರ ಬಂಟ್ವಾಳ್‌ನಿಂದ ಹಣ ಪಡೆದಿದ್ದು ಬಾಕಿ ಹಣ ತೀರಿಸಲು ಸಾಧ್ಯವಾಗದ ಕಾರಣ ಹತ್ಯೆಗೆ ಸುಪಾರಿ ನೀಡಿದ್ದ. ಶರೀಫ್ ಸುರೇಂದ್ರ ಬಂಟ್ವಾಳ್‌ನೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದು ಹತ್ಯೆಗೆ ಸಹಕಾರ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಜೈಲಲ್ಲಿರುವ ಆರೋಪಿ ಶರಣ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದು ಆತನೂ ಸುರೇಂದ್ರ ಬಂಟ್ವಾಳ್ ಜತೆ ವೈಯಕ್ತಿಕ ದ್ವೇಷ ಹೊಂದಿದ್ದು, ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಸುರೇಂದ್ರನನ್ನು ಹತ್ಯೆ ಮಾಡುವಂತೆ ಗಿರೀಶ್‌ನನ್ನು ಪುಸಲಾಯಿಸಿದ್ದ. ಹತ್ಯೆ ಬಳಿಕ ತಲೆಮರೆಸಿಕೊಳ್ಳಲು ದಿವ್ಯರಾಜ್, ಅನಿಲ್ ಪಂಪ್‌ವೆಲ್ ಅವರಿಂದ ವಾಹನ ವ್ಯವಸ್ಥೆ ಮಾಡಿಸಿಕೊಟ್ಟಿದ್ದ. ಉಜಿರೆ ನಿವಾಸಿ ರಾಜೇಶ್ ಎಂಬಾತ ಆರೋಪಿಗಳಿಗೆ ಉಜಿರೆ ಪರಿಸರದಲ್ಲಿ ತಂಗಲು ವ್ಯವಸ್ಥೆ ಮಾಡಿಸಿದ್ದಾನೆ. ಆರೋಪಿಗಳು ತಪ್ಪಿಸಿಕೊಂಡು ಹೋಗಲು ತನ್ನ ಕಾರನ್ನು ರಾಜೇಶ್ ನೀಡಿದ್ದ. ದಿವ್ಯರಾಜ್ 2017ರಲ್ಲಿ ಬೆಂಜನಪದವಿನಲ್ಲಿ ನಡೆದ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿಯಾಗಿದ್ದು ಕಿಶನ್ ಹೆಗ್ಡೆ ಆಪ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿವಿಧ ಠಾಣೆಗಳ ಅನುಭವಿ ಸಿಬ್ಬಂದಿ ಒಳಗೊಂಡ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಸುರೇಂದ್ರ ಬಂಟ್ವಾಳ್ ಪ್ರಕರಣದ ಹೆಚ್ಚಿನ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಆಕಾಶಭವನ್ ಶರಣ್‌ನನ್ನು ಕಸ್ಟಡಿಗೆ ಪಡೆದು ಬೆಂಗಳೂರಿನಿಂದ ಕರೆತರಲಾಗಿದೆ. ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತ ದಿನೇಶ್ ಶೆಟ್ಟಿ ಹತ್ಯೆ ಯತ್ನ ಪ್ರಕರಣದಲ್ಲಿ ಎಲ್ಲ ಆರೋಪಿಗಳ ಬಂಧನ ಆಗಿದೆ. ಮೆಲ್ಕಾರ್‌ನ ಬೋಗೊಡಿಯಲ್ಲಿ ನಡೆದ ಚೆನ್ನ ಫಾರೂಕ್ ಹತ್ಯೆ ಪ್ರಕರಣದಲ್ಲಿ ಇನ್ನೂ ಇಬ್ಬರ ಬಂಧನ ಬಾಕಿ ಇದೆ. ಆರೋಪಿಗಳ ಸುಳಿವು ಲಭ್ಯವಾಗಿದ್ದು ಶೀಘ್ರ ಬಂಧನವಾಗಲಿದೆ ಲಕ್ಷ್ಮೀಪ್ರಸಾದ್ ದ.ಕ. ಜಿಲ್ಲಾ ಎಸ್‌ಪಿ
ಮೂವರು ಆರೋಪಿಗಳಿಗೆ ಶೋಧ ಮಂಗಳೂರು: ಫಳ್ನೀರ್‌ನ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ದಾಂಧಲೆ ಹಾಗೂ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳಿಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಉಳ್ಳಾಲದ ನಿವಾಸಿಗಳಾದ ಸಮೀರ್, ಸಿದ್ದಿಕ್ ಮತ್ತು ಅಫ್ರಾನ್ ತಪ್ಪಿಸಿಕೊಂಡವರು. ಜುನೈದ್ ಮತ್ತು ಇಜಾಜ್ ಎಂಬುವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ನೀಡಿದ್ದು, ಅವರು ಪೊಲೀಸ್ ವಶದಲ್ಲಿದ್ದಾರೆ. ತಲೆಮರೆಸಿಕೊಂಡವರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಓರ್ವ ಒಂದು ಕೊಲೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.