

ಚೆನ್ನೈ: ಡಿಎಸ್ಪಿ ಶ್ರೇಣಿಯ ಅಧಿಕಾರಿಯ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ಅದನ್ನು ಮಾದಕವಸ್ತು ಮಾರಾಟದ ಕಾರಸ್ಥಾನವನ್ನಾಗಿ ಮಾಡಿಕೊಂಡು ಇದೀಗ ಸಿಕ್ಕಿಬಿದ್ದಿದ್ದಾನೆ.
ಅರುಣ್ (40) ಬಂಧಿತ. ಚೆನ್ನೈನ ಕಿಲ್ಪಾಕ್ ಗಾರ್ಡನ್ಸ್ನಲ್ಲಿರುವ ವಸತಿ ಸಮುಚ್ಚಯದಲ್ಲಿದ್ದ ಸಿಬಿ-ಸಿಐಡಿಯಲ್ಲಿ ಡಿಎಸ್ಪಿ ಆಗಿರುವವರ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಈ ಮನೆಯನ್ನು ಬಳಸಿಕೊಂಡು ಆತ ಚೆನ್ನೈ ನಗರದಾದ್ಯಂತ ಮಾದಕವಸ್ತು ಮಾರಾಟ ದಂಧೆ ನಡೆಸುತ್ತಿದ್ದ.
ಮಾದಕವಸ್ತು ನಿಯಂತ್ರಣ ಬ್ಯೂರೋದ (ಎನ್ಸಿಬಿ) ಅಧಿಕಾರಿಗಳು ತಮಗೆ ಸಿಕ್ಕ ಮಾಹಿತಿಯನ್ನು ಆಧರಿಸಿ, ಫ್ಲ್ಯಾಟ್ ಮೇಲೆ ದಾಳಿ ಮಾಡಿದರು. ಆಗ ಫ್ಲ್ಯಾಟ್ನಲ್ಲಿದ್ದ ಒಬ್ಬನನ್ನು ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದು, ಆತನಿಗಾಗಿ ಶೋಧಿಸಲಾಗುತ್ತಿದೆ. ಸಾಕಷ್ಟು ಪ್ರಮಾಣದ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ವಿವರವನ್ನೂ ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿಬಿ-ಸಿಐಡಿಯಲ್ಲಿ ಡಿಎಸ್ಪಿ ಆಗಿರುವ ಅಧಿಕಾರಿಯು ಈ ಮನೆಯ ಹತ್ತಿರ ಹೋಗುತ್ತಿರಲಿಲ್ಲ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬಾಡಿಗೆದಾರರು ಬಾಡಿಗೆ ಮೊತ್ತವನ್ನು ವರ್ಗಾಯಿಸುತ್ತಿದ್ದರು. ಹಾಗಾಗಿ, ಅವರಿಗೆ ಈ ಬಗ್ಗೆ ಸುಳಿವಿರಲಿಲ್ಲ ಎಂದು ತಿಳಿಸಿದ್ದಾರೆ.