

ಬೆಂಗಳೂರು: ಜಿಎಸ್‌ಟಿ, ಬರ ಪರಿಹಾರ, ನರೇಗಾ, ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯವನ್ನು ನೋಡಿಕೊಂಡು ಇನ್ನೆಷ್ಟು ದಿನ ಸುಮ್ಮನೆ ಕೂರಬೇಕು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್, ರಾಜ್ಯದ ಹಿತ ಕಾಯುವ ಹೋರಾಟಕ್ಕೆ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಮಾಡುತ್ತಿರುವ ಅನ್ಯಾಯವನ್ನು ಪ್ರತಿ ವರ್ಷ ಗಮನಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಿ ಈ ಬಗ್ಗೆ ದೇಶ ಹಾಗೂ ರಾಜ್ಯದ ಜನರಿಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಫೆ.7ರಂದು ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸುತ್ತಿದೆ ಎಂದರು.
ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿವರಿಸಿ ಮನವಿ ಮಾಡಿದ್ದೇವೆ. ಇದುವರೆಗೂ ಬರಗಾಲದ ಪರಿಹಾರ ಬಿಡುಗಡೆ ಮಾಡಿಲ್ಲ. ನರೇಗಾ ಯೋಜನೆಯಲ್ಲಿ ನೀಡಲಾಗುವ 100 ಮಾನವ ಕೂಲಿ ದಿನಗಳ ಪ್ರಮಾಣವನ್ನು ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳಿಗೆ ಏರಿಕೆ ಮಾಡಬಹುದು ಎಂದು ಕಾನೂನಿನಲ್ಲಿ ಇದೆ. ಅದನ್ನೂ ಅವರು ನೀಡುತ್ತಿಲ್ಲ. ನ್ಯಾಯಕ್ಕಾಗಿ, ಜನರ ಬದುಕಿಗಾಗಿ, ಜನರಿಗೆ ಆರ್ಥಿಕ ಶಕ್ತಿ ತುಂಬಲು ಈ ಹೋರಾಟಕ್ಕೆ ಹೆಜ್ಜೆ ಇಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಂಸತ್ತಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳ ವಿಚಾರದಲ್ಲಿ ವಿತ್ತ ಸಚಿವರ ಪಾತ್ರವಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಣಕಾಸು ಆಯೋಗದ ವಿಚಾರದಲ್ಲಿ ಆಗಿರುವ ತಾರತಮ್ಯ ಸರಿಪಡಿಸಲು ವಿತ್ತ ಸಚಿವರಿಗೆ ಸಂಪೂರ್ಣ ಅಧಿಕಾರವಿದೆ. ಗುಜರಾತಿನಲ್ಲಿ ಗ್‌ಟಿ ಸಿಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು ಕರ್ನಾಟಕ ರಾಜ್ಯಕ್ಕೂ ಆ ಯೋಜನೆ ನೀಡಿ. ಅವರು ಕರ್ನಾಟಕದವರಾಗಿದ್ದು ಕರ್ನಾಟಕಕ್ಕೂ ಒಂದು ಗ್‌ಟಿ ಸಿಟಿ ನೀಡಲಿ. ನಾವು ಅದಕ್ಕೆ ಸಿದ್ಧರಾಗಿದ್ದೇವೆ. ನಾವು ಭಾರತೀಯರೇ. ದೇಶವನ್ನು ಒಟ್ಟಾಗಿಡುವುದು ನಮ್ಮ ಆಶಯ. ಆದರೆ ಇಂತಹ ತಾರತಮ್ಯವೇಕೆ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.