

ನವದೆಹಲಿ: 2020 ರ ಸಿಎಎ ಹಾಗೂ ಎನ್ಆರ್ಸಿ ನೀತಿಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆದಿದ್ದ ಭೀಕರ ದಂಗೆಯ ರೂವಾರಿ ಎಂಬ ಆರೋಪವನ್ನು ಎದುರಿಸುತ್ತಿರುವ ಶಾರ್ಜೀಲ್ ಇಮಾಮ್ (Sharjeel Imam) ಗೆ ದೆಹಲಿ ಕರ್ಕದೂಮ ನ್ಯಾಯಾಲಯ ಮಧ್ಯಂತರ ಜಾಮೀನನ್ನು ನೀಡಿದೆ.
ಹತ್ತಿರದ ಸಂಬಂಧಿಯೊಬ್ಬರ ಮದುವೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಶಾರ್ಜೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರ ವರೆಗೆ 6 ದಿನಗಳ ಮಟ್ಟಿಗೆ ಜಾಮೀನು ನೀಡಿ ಆದೇಶಿಸಿದೆ.
ಆದರೆ, ಈ ಸಮಯದಲ್ಲಿ ಶಾರ್ಜೀಲ್ ಜೊತೆ ಭದ್ರತಾ ಸಿಬ್ಬಂದಿಗಳು ಇರಲಿದ್ದು, ಮನೆಯವರನ್ನು ಹೊರತುಪಡಿಸಿ, ಅಪರಿಚಿತ ಹಾಗೂ ಇನ್ನಿತರ ಜನರ ಸಂಪರ್ಕಕ್ಕೆ ಬರುವಂತಿಲ್ಲ ಎಂದು ನ್ಯಾಯಪೀಠ ಷರತ್ತನ್ನು ವಿಧಿಸಿದೆ.
2020ರಲ್ಲಿ ದೆಹಲಿಯಲ್ಲಿ ನಡೆದ ಭೀಕರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾರ್ಜೀಲ್ ಇಮಾಮ್ ಮೇಲೆ ಹಲವು ಗಂಭೀರ ಆರೋಪಗಳಿವೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಮೀಪ ನಡೆದ ಹಿಂಸಾಚಾರದ ಪ್ರಕರಣದಲ್ಲಿ ಶಾರ್ಜೀಲ್ ವಿರುದ್ಧ ದೋಷಾರೋಪಣ ಪಟ್ಟಿ ದಾಖಲಾಗಿತ್ತು.
ಅಂದು ಇಮಾಮ್ ಕೇವಲ ಪ್ರಚೋದನೆ ನೀಡಿದ್ದಲ್ಲ, ಬದಲಿಗೆ ಆ ಹಿಂಸಾಚಾರದ ಹಿಂದೆ ಇದ್ದ ದೊಡ್ಡ ಸಂಚಿನ ಭಾಗವಾಗಿದ್ದರು ಎಂದು ನ್ಯಾಯಾಲಯ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಶಾರ್ಜೀಲ್ ಇಮಾಮ್, 2019ರ ಡಿಸೆಂಬರ್ 13 ರಂದು ಜಾಮಿಯಾ ಸಮೀಪ ನೀಡಿದ್ದ ಭಾಷಣ ಬಹಳ ಪ್ರಚೋದನಕಾರಿಯಾಗಿತ್ತು ಎಂದು ನ್ಯಾಯಾಲಯ ಹೇಳಿತ್ತು.
ಶಾರ್ಜೀಲ್ ಇಮಾಮ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ಗಲಭೆ, ಪ್ರಚೋದನೆ, ಧರ್ಮಗಳ ನಡುವೆ ದ್ವೇಷ ಹರಡುವುದು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪ ಸೇರಿದಂತೆ ಹಲವು ಸೆಕ್ಷನ್‌ಗಳನ್ನು ಹೇರಲಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಅಂದು ನಡೆದ ಆ ದೊಡ್ಡ ಗಲಭೆ ಯಾವುದೇ ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಅದೊಂದು ವ್ಯವಸ್ಥಿತ ಯೋಜನೆಯ ಭಾಗವಾಗಿತ್ತು. ಶರ್ಜೀಲ್ ಇಮಾಮ್ ತನ್ನ ಭಾಷಣದ ಮೂಲಕ ಜನರನ್ನು ಪ್ರಚೋದಿಸಿ, ರಸ್ತೆ ತಡೆ ಮಾಡುವಂತೆ ಉತ್ತೇಜಿಸಿದ್ದು, ಇಮಾಮ್ ಉದ್ದೇಶಪೂರ್ವಕವಾಗಿ ನಿರ್ದಿಷ್ಟ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು, (ಏಜೆನ್ಸೀಸ್).