ಸೂಕ್ತ ಚಿಕಿತ್ಸೆಯಿಂದ ಶ್ವಾಸರೋಗಗಳಿಗೆ ಶಾಶ್ವತ ಪರಿಹಾರ

ವಿಜಯವಾಣಿ
Published on
ಆಸ್ತಮಾದಂತಹ ಉಸಿರಾಟ ಸಂಬಂಧೀ ಕಾಯಿಲೆಗಳು ಶಾಶ್ವತವಾಗಿ ಅಸ್ತಮಾನ ಆಗಬೇಕೆಂದರೆ ಅದರ ಮೂಲಕಾರಣ ವನ್ನು ಅರಿತು ಚಿಕಿತ್ಸೆಯನ್ನು ಕೇಂದ್ರೀಕರಿಸಬೇಕು. ಶ್ವಾಸರೋಗ ಗಳಲ್ಲಿ ಹೊಗೆ, ಧೂಳು, ಕಲುಷಿತ ವಾತಾವರಣ, ಶೀತಲ ಹವಾಮಾನ, ಕಫ ಹಾಗೂ ವಾತ ಹೆಚ್ಚಿಸುವ ಆಹಾರ ವಿಹಾರ ಗಳು ವ್ಯಾಧಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಚಿಕಿತ್ಸಾ ಕಾಲದಲ್ಲಿ ಅವುಗಳಿಂದ ಸಾಧ್ಯವಾದಷ್ಟು ದೂರವಿರುವುದರಿಂದ ಬೇಗನೆ ಗುಣಮುಖರಾಗಲು ಸಾಧ್ಯ.

ಪ್ರಾಣವಹ ಸ್ರೋತಸ್ಸನ್ನು ತನ್ಮೂಲಕ ಶ್ವಾಸಕಾಂಗವ್ಯೂಹದ ಬಲವನ್ನು ವರ್ಧಿಸುವುದು ಸಫಲ ಚಿಕಿತ್ಸೆಯ ಮೂಲ ಹಾದಿ. ಅಲರ್ಜಿಗೆ ನೀಡುವ ಚಿಕಿತ್ಸೆ ತಾತ್ಕಾಲಿಕ ಪರಿಣಾಮವನ್ನಷ್ಟೇ ಬೀರುತ್ತದೆ. ಉದಾಹರಣೆಗೆ ಓರ್ವ ರೋಗಿಗೆ ಮಾವಿನಮರದ ಹೂವಿನ ಅಲರ್ಜಿಯಿದ್ದಾಗ ಅದಕ್ಕೆಂದೇ ವಿಶೇಷವಾದ ಚಿಕಿತ್ಸೆ ಏನೂ ಇರುವುದಿಲ್ಲ. ಪ್ರತಿಯೊಂದು ಅಲರ್ಜಿ ಕಾರಕಗಳಿಗೆ ಪ್ರತ್ಯೇಕವಾದ ಚಿಕಿತ್ಸೆ ಎಂಬುದು ಜಗತ್ತಿನಲ್ಲಿ ಇಲ್ಲ. ವಿವಿಧ ಅಲರ್ಜಿ ಪರೀಕ್ಷೆ ನಡೆಸಿ ಯಾವುದೆಂದು ತಿಳಿದುಕೊಂಡರೂ ಅದನ್ನವಲಂಬಿಸಿ ನೇರವಾದ ಚಿಕಿತ್ಸೆ ಎಂಬುದಿಲ್ಲ, ಅದರ ಅಗತ್ಯವೂ ಇಲ್ಲ. ಶ್ವಾಸಕ್ಕೆ ಸಂಬಂಧಿಸಿದ ಅವಯವಗಳ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವ, ಅವುಗಳನ್ನು ಬಲಗೊಳಿಸುವ ಆಯುರ್ವೆದ ಹೇಳುವ ಔಷಧ, ಆಹಾರ, ವಿಹಾರಗಳೇ ಅತ್ಯಂತ ಪ್ರಶಸ್ತವೆಂಬುದು ಸರ್ವವಿದಿತ. ಈ ವಿಧಾನದಲ್ಲಿ ಕಾಯಿಲೆ ಅನುವಂಶಿಕವಾಗಿ ಬಂದಿದ್ದರೂ ಸರಿಗೊಳಿಸಲು ಸಾಧ್ಯ.

ಬಹಳ ವರ್ಷಗಳಿಂದ ಶ್ವಾಸರೋಗ ಬಾಧಿಸುತ್ತಿದ್ದಲ್ಲಿ ಪಂಚಕರ್ಮ ಚಿಕಿತ್ಸೆಗಳು ವರದಾನವಾಗುತ್ತವೆ. ವಾತಹರ, ಕಫಹರ, ಬೃಂಹಣ, ಸ್ನೇಹನಗಳು ಯಶಸ್ವೀ ಚಿಕಿತ್ಸೆಗೆ ಅತ್ಯಗತ್ಯ. ಸ್ನೇಹನ, ಸ್ವೇದನಗಳಲ್ಲದೆ ಶರೀರ ಶುದ್ಧಿಗೊಳಿಸುವ ಶೋಧನ ಚಿಕಿತ್ಸೆಗಳಾದ ವಮನ ಕರ್ಮ, ವಿರೇಚನ, ನಸ್ಯಕರ್ಮ ಹಾಗೂ ಔಷಧೀಯ ಧೂಮಪಾನ ಚಿಕಿತ್ಸೆಗಳು ಶ್ವಾಸರೋಗಿಗಳ ಮೂಲಕಾರಣದ ಚಿಕಿತ್ಸೆಗೆ ಅತ್ಯಂತ ಪ್ರಶಸ್ತ. ಶಮನ ಚಿಕಿತ್ಸೆಯಲ್ಲಿ ದೀಪನ, ಪಾಚನ, ಅನುಲೋಮನ ಔಷಧಗಳೊಂದಿಗೆ ಚಿಕಿತ್ಸೆ ಪ್ರಾರಂಭವಾಗಿ ಶ್ವಾಸಕಾಂಗಗಳಿಗೆ ಬಲನೀಡುವ ಲೇಹ್ಯಗಳೊಂದಿಗೆ ಅಂತ್ಯವಾಗುತ್ತದೆ. ರೋಗವು ಕಡಿಮೆಯಾಗಿ ಸಹಜಸ್ಥಿತಿಗೆ ಬಂದ ಮೇಲಷ್ಟೇ ಲೇಹ್ಯಗಳನ್ನು ಸೇವಿಸಿ ಶಕ್ತಿವರ್ಧಿಸಿಕೊಳ್ಳಬೇಕು ಹೊರತು ಜಾಹೀರಾತು ನೋಡಿಕೊಂಡು, ಅಂತರ್ಜಾಲದಲ್ಲಿ ಹುಡುಕಾಡಿ ಆರಂಭದಲ್ಲೇ ಚ್ಯವನಪ್ರಾಶ ಮೊದಲಾದ ಲೇಹಗಳನ್ನು ಉಪಯೋಗಿಸುವುದು ಸರಿಯಾದ ಕ್ರಮವಲ್ಲ.

ಹಿಪ್ಪಲಿ, ಧತ್ತೂರ, ಆಡುಸೋಗೆ, ಕಾಳುಮೆಣಸು, ಎಕ್ಕೆಗಿಡ, ಪುಷ್ಕರಮೂಲ, ಅಮೃತಬಳ್ಳಿ, ಮರದರಿಶಿನ, ಯಷ್ಟಿಮಧು, ನಾಗಕೇಶರ, ಬೆಟ್ಟದನೆಲ್ಲಿಕಾಯಿ, ತುಳಸಿ, ಕಚೋರ, ಹೆಗ್ಗುಳ್ಳ, ನೆಲಗುಳ್ಳ, ಭಾರಂಗೀ, ಅರಿಶಿನ, ಶುಂಠಿ, ನುಗ್ಗೆ ಮೊದಲಾದ ಔಷಧೀಯ ಸಸ್ಯಗಳು ಉತ್ತಮ ವೈದ್ಯರ ಕೈಯಲ್ಲಿ ರಾಮಬಾಣವಾಗಿ ಕೆಲಸಮಾಡುತ್ತವೆ. ನೀಲಗಿರಿ, ಮಜ್ಜಿಗೆಹುಲ್ಲು ಮುಂತಾದ ಆವಿಯಾಗುವ ತೈಲಗಳ ಹಬೆಯನ್ನು ಸೇವಿಸುವುದರಿಂದ, ಉಸಿರಾಡಲು ತೀವ್ರವಾಗಿ ಕಷ್ಟವಾಗುತ್ತಿದ್ದಾಗ ಪಚ್ಚೆಕರ್ಪರವನ್ನು ಆಘ್ರಾಣಿಸುವುದರಿಂದ, ತುಳಸಿಯ ಲಘುಕಷಾಯ ಸೇವನೆಯಿಂದ, ಸೈಂಧವ ತೈಲವನ್ನು ಎದೆಗೆ ಹಚ್ಚಿ ಉಜ್ಜುವುದರಿಂದ ತಾತ್ಕಾಲಿಕ ಶಮನ ದೊರೆಯುತ್ತದೆ.

ಬೆಳಗ್ಗೆ ಹಾಗೂ ಮಧ್ಯಾಹ್ನ ಉತ್ತಮ ಪ್ರಮಾಣದಲ್ಲಿ ಆಹಾರ ಸ್ವೀಕರಿಸಿ ರಾತ್ರಿಯ ಊಟವನ್ನು ಕಡಿಮೆ ಪ್ರಮಾಣದಲ್ಲಿ, ಮಲಗುವುದಕ್ಕಿಂತ ಎರಡು-ಮೂರು ಗಂಟೆ ಮುಂಚಿತವಾಗಿ ಮಾಡುವುದು ಒಳ್ಳೆಯದು. ಉಸಿರಾಟದ ಸಮಸ್ಯೆಯಿಂದಾಗಿ ರಾತ್ರಿಹೊತ್ತು ಸರಿಯಾಗಿ ನಿದ್ರೆ ಬರಲಿಲ್ಲ ಎಂದು ಹಗಲು ನಿದ್ರೆ ಮಾಡಿದರೆ ರೋಗವು ಉಲ್ಬಣವಾಗುತ್ತದೆ. ಒಣಕೆಮ್ಮು ಇದ್ದಾಗ ಮಾತ್ರ ಹಗಲು ನಿದ್ರೆ ತಾತ್ಕಾಲಿಕವಾಗಿ ಅನುಕೂಲ ಮಾಡುತ್ತದೆ. ರಾತ್ರಿ ಹೊತ್ತು ಚಪಾತಿ, ರೊಟ್ಟಿ, ರಾಗಿಮುದ್ದೆಯಂತಹ ಆಹಾರಗಳನ್ನು ಸೇವಿಸದೆ ಜೀರ್ಣಕ್ಕೆ ಸುಲಭವಾದ ಆಹಾರಗಳನ್ನೇ ಯೋಜಿಸಬೇಕು.

ಬೆಳೆದು ಕಟಾವು ಮಾಡಿ ಆರು ತಿಂಗಳು ಕಳೆದ ಹಳೆಯ ಅಕ್ಕಿ, ಕೆಂಪಕ್ಕಿ, ಜೋಳ, ಗೋಧಿ ಹಾಗೂ ಹೆಸರುಬೇಳೆಗಳು ಅನುಕೂಲಕರವಾಗಿವೆ. ಜೇನುತುಪ್ಪ, ಆಡಿನ ಹಾಲು, ದೇಶೀ ಹಸುವಿನ ತುಪ್ಪ, ಸೊಪ್ಪುತರಕಾರಿಗಳು, ನುಗ್ಗೆಕಾಯಿ, ಹೀರೆಕಾಯಿ, ಪಡುವಲಕಾಯಿ, ಮೂಲಂಗಿ, ಬೀಟ್​ರೂಟ್, ಕ್ಯಾರೆಟ್, ವಿವಿಧ ಬೀನ್ಸ್​ಗಳು, ಸೋರೆಕಾಯಿ, ನವಿಲುಕೋಸು, ಹಾಗಲಕಾಯಿ, ಅರಿಶಿನ, ದೊಡ್ಡಪತ್ರೆ, ಕರಿಬೇವು, ಹಿಂಗು, ಕಾಳುಮೆಣಸು, ಹಿಪ್ಪಲಿ, ಎಳ್ಳು, ಸಾಸಿವೆ, ದಾಲ್ಚಿನ್ನಿ, ಲವಂಗ, ಸೈಂಧವ ಲವಣ, ಮಾದಲಹಣ್ಣು, ಪಪ್ಪಾಯ, ಸಾವಯವ ದ್ರಾಕ್ಷಿಹಣ್ಣು, ಖರ್ಜೂರ, ಅಂಜೂರಗಳು ಪಥ್ಯಗಳಾಗಿದ್ದು ರೋಗ ಶಮನಕ್ಕೆ ಸಹಕಾರಿಯಾಗಿವೆ. ಒಣ, ಶೀತಲ, ಜೀರ್ಣಕ್ಕೆ ಕಠಿಣವಾದ ಆಹಾರ ಪದಾರ್ಥಗಳು ಶ್ವಾಸರೋಗವನ್ನು ಹೆಚ್ಚಿಸುವ ಗುಣ ಹೊಂದಿವೆ.

ತಂಪಾದ ನೀರು, ಶೀತಲ ಹಣ್ಣಿನರಸ, ಎಣ್ಣೆಯಲ್ಲಿ ಮುಳುಗಿಸಿ ಕರಿದು ಮಾಡಿದ ತಿಂಡಿ, ಮೊಸರು, ಎಮ್ಮೆಯ ಹಾಲು, ಉದ್ದು, ಮೀನು, ಧೂಳು, ಹೊಗೆ, ತಂಪಾದ ವಾತಾವರಣ, ತಂಬಾಕಿನ ಧೂಮಪಾನ, ಪೂರ್ವದಿಕ್ಕಿನ ಗಾಳಿ, ಮಲಮೂತ್ರವೇ ಮೊದಲಾದ ವೇಗಗಳನ್ನು ತಡೆಯುವುದು, ಮಿತಿಮೀರಿದ ದೈಹಿಕ ಶ್ರಮ, ಅಗತ್ಯಕ್ಕಿಂತ ಹೆಚ್ಚಿನ ನಡಿಗೆ, ಅತಿಯಾದ ಲೈಂಗಿಕಕ್ರಿಯೆ, ಶೀತಲೀಕರಿಸಿದ ಐಸ್ಕ್ರೀಮ್ಂತಹ ಆಹಾರ, ಬೆಣ್ಣೆ, ಹಳೆಯ ಹುಳಿಯ ಮಜ್ಜಿಗೆ, ಬಾಳೆಹಣ್ಣು, ಕಿತ್ತಳೆ, ಖರಬೂಜ, ಕಲ್ಲಂಗಡಿ, ಸೀತಾಫಲ ಮೊದಲಾದ ಶೀತಕರ ಹಣ್ಣುಗಳ ಸೇವನೆಯಿಂದ ಶ್ವಾಸರೋಗಗಳು ಹೆಚ್ಚಾಗುತ್ತವೆ. ಚಿಕಿತ್ಸೆ, ಆಹಾರ, ವಿಹಾರಗಳ ಸಮ್ಯಕ್ ಅನುಷ್ಠಾನದಿಂದ ಶ್ವಾಸರೋಗವನ್ನು ಗೆಲ್ಲಬಹುದು. (ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net