

ಸೊರಬ: ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಸಾರ್ವಜನಿಕರು ಪಕ್ಷಭೇದ ಮರೆತು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪುರಸಭೆ ವ್ಯಾಪ್ತಿಯಲ್ಲಿ ಭಾನುವಾರ 3.5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೀದಿ ದೀಪ, ಕುಡಿಯುವ ನೀರು ಸೇರಿ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದರು.
ಕೆಲವು ಕಾಮಗಾರಿಗಳನ್ನು ಮನಬಂದಂತೆ ಮಾಡಲಾಗಿದೆ. ಅದರಿಂದ ಯಾವ ಉಪಯೋಗವೂ ಇಲ್ಲ. ಸಾರ್ವಜನಿಕರ ಹಣ ದುರ್ಬಳಕೆ ಆಗದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕರ್ತವ್ಯ. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ. ಶರಾವತಿ ಹಿನ್ನೀರಿನಿಂದ ತಾಲೂಕಿನ 350 ಗ್ರಾಮಗಳಿಗೂ ಸುಮಾರು 680 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯ ಆಶ್ರಯ ಬಡಾವಣೆ ಹಾಗೂ ಕೆಲವು ವಾರ್ಡ್‌ಗಳಲ್ಲಿ ಅಂಗನವಾಡಿ ನಿರ್ಮಾಣ, ರಸ್ತೆ, ಚರಂಡಿ ದುರಸ್ತಿ ಸೇರಿ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಎಂಟು ವರ್ಷದಿಂದ ಕೇವಲ 300 ಪಬ್ಲಿಕ್ ಶಾಲೆಗಳಿದ್ದವು. ಮೊದಲ ಬಾರಿಗೆ 800 ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲು ಚಿಂತಿಸಲಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಪ್ರಭು ಮೇಸಿ, ಸದಸ್ಯರಾದ ಈರೇಶ್ ಮೇಸಿ, ಪ್ರಸನ್ನಕುಮಾರ್, ಮಧುರಾಯ್ ಶೇಟ್, ಅನ್ಸರ್ ಅಹಮದ್, ಸುಲ್ತಾನ ಬೇಗಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಇಒ ಶಶಿಧರ್, ಪುರಸಭೆ ಮುಖ್ಯಾಧಿಕಾರಿ ಚಂದನ್, ಮುಖಂಡರಾದ ತಬಲಿ ಬಂಗಾರಪ್ಪ, ಗಣಪತಿ, ಎಂ.ಡಿ.ಶೇಖರ್, ಡಾ. ಉಮೇಶ್ ಭದ್ರಾಪುರ, ಆಶ್ರಯ ಸಮಿತಿ ಸದಸ್ಯರಾದ ನೆಹರು ಕೊಡಕಣಿ, ಪ್ರಶಾಂತ್ ಮೇಸಿ ಇತರರಿದ್ದರು.