ಕಾಂಗ್ರೆಸ್ ಸರ್ಕಾರಕ್ಕೆ ಜನರ ಛೀಮಾರಿ; ಮಾಜಿ ಸಿಎಂ ಬಿಎಸ್ ವೈ ವಾಗ್ದಾಳಿ

bsy
Published on

ಬೆಂಗಳೂರು: ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಬರಗಾಲದ ಬವಣೆ, ಅನೇಕ ಸಮಸ್ಯೆಗಳಿಂದ ಬಳಲಿರುವ ಜನರು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ಮಾಡಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ‌ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಗಣೇಶ ಹಬ್ಬದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ಬರಗಾಲ ಘೋಷಿಸಿ ಯುದ್ಧೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೊಂಡಿಲ್ಲ. ರೈತರ ಆತ್ಮಹತ್ಯೆ ತಾತ್ಸಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ವಿದ್ಯುತ್ ಅಭಾವ, ಕಾವೇರಿ ತಕರಾರು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವಿದ್ದರ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧದ ಚಳವಳಿ ಕುರಿತು ಮುಂದುವರಿದ ಸಭೆಯಲ್ಲಿ ರೂಪರೇಷೆ ಅಂತಿನವಾಗಲಿದೆ. ರಾಜ್ಯ ನಾಯಕರ ತಂಡಗಳ ಪ್ರವಾಸ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಹುರುಪು ತುಂಬುವ ಕೆಲಸ ಮಾಡುತ್ತೇವೆ. ರಾಜ್ಯ ಸರ್ಕಾರದ ಜನ ವಿರೋಧಿ ನಿಲುವಿನ ವಿರುದ್ಧ ಗಣೇಶ‌ ಹಬ್ಬ ಮುಗಿದ ತಕ್ಷಣ ಹೋರಾಟಕ್ಕೆ ಇಳಿಯುತ್ತೇವೆ ಎಂದು ಬಿಎಸ್ ವೈ ಪುನರುಚ್ಚರಿಸಿದರು.

ದೆಹಲಿ ಭೇಟಿ ಖಚಿತ

ದೆಹಲಿಯಲ್ಲಿ ಬುಧವಾರ ಕರೆದಿರುವ ಪಕ್ಷದ ಕೇಂದ್ರೀಯ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೆಹಲಿಗೆ ತೆರಳುತ್ತಿರುವೆ ಎಂದು ಯಡಿಯೂರಪ್ಪ ಖಚಿತಪಡಿಸಿದರು. ಈ ಸಂದರ್ಭದಲ್ಲಿ ಮೈತ್ರಿ ವಿಷಯ ಚರ್ಚಿಸುತ್ತೀರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನೆಲ್ಲ ಪ್ರಧಾನಿ ಮೋದಿ, ಅಮಿತ್ ಶಾ ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net