

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರ ಬೆಲೆ ಏರಿಕೆ, ಕೋಮು ತುಷ್ಟೀಕರಣ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿದಿನ ಒಂದಿಲ್ಲೊಂದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಸಂಕಷ್ಟ ತಂದ್ದೊಡ್ಡುತ್ತಿದೆ. ಛಾಪಾ ಕಾಗದ, ಪಹಣಿ, ಹಾಲು, ದಿನಸಿ, ವಿದ್ಯುತ್, ಔಷಧಗಳ ಬೆಲೆ ಏರಿಸಿದೆ. ದುಡಿಮೆಯ ಬಹುಪಾಲು ಹಣವನ್ನು ಬದುಕಿಗಾಗಿ ವಿನಿಯೋಗಿಸಿಕೊಂಡು ಖಾಲಿ ಕೈಯಲ್ಲಿ ಕೂರುವಂತಾಗಿದೆ ಎಂದು ದೂರಿದರು.
ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿ ಬಹುಸಂಖ್ಯಾತ ಹಿಂದುಗಳನ್ನು ಕಡೆಗಣಿಸಿದೆ. ನಿಗಮ- ಮಂಡಳಿ, ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸೇರಿ ಸಚಿವರು ಭಾಗಿಯಾಗಿ ಬೊಕ್ಕಸವನ್ನು ಖಾಲಿ ಮಾಡುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ತಾಳಿರುವ ರಾಜ್ಯ ಸರ್ಕಾರ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಗೂ ಮುನ್ನ ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ವಿನಾಯಕ ವೃತ್ತ ತಲುಪಿಸಿದರು. ಪ್ರತಿಭಟನೆ ನಂತರ ನಾಡಕಚೇರಿ ಉಪತಹಸೀಲ್ದಾರ್ ಗೌತಮ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ, ಮುಖಂಡರಾದ ಆರ್.ಟಿ.ಗೋಪಾಲ, ಎಂ.ಬಿ.ಮಂಜುನಾಥ, ಸುರೇಶ ಸಿಂಗ್, ಸುಧೀಂದ್ರ ಪೂಜಾರಿ, ಸುಂದರೇಶ, ಮಲ್ಲಿಕಾರ್ಜುನ, ಲೀಲಾ ಶಂಕರ್, ನಾಗರತ್ನ, ಎನ್.ಆರ್.ದೇವಾನಂದ್, ಎಂ.ಎನ್.ಸುಧಾಕರ, ಬೆಳಗೋಡು ಗಣಪತಿ, ಎನ್.ಸತೀಶ, ಸರಸ್ವತಿ ಇತರರಿದ್ದರು.