

ಮಡಿಕೇರಿ
ಕಳೆದ ವರ್ಷ ಇಂಧನ ಬೆಲೆಗಳನ್ನು ನಿರಂತರವಾಗಿ ಏರಿಸಿಕೊಂಡು ಬಂದಿದ್ದ ಕೇಂದ್ರ ಸರ್ಕಾರ ಜನ ಸಾಮಾನ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ತನ್ನ ಕಾಯಕಕ್ಕೆ ತಾತ್ಕಾಲಿಕ ವಿರಾಮ ಕೊಟ್ಟಿತ್ತು. ಇದರಿಂದ ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಕರ್ನಾಟಕ ಸರ್ಕಾರ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಮೂಲಕ ಶಾಕ್ ಕೊಟ್ಟಿದೆ. ಮತ್ತೊಂದು ಕಡೆ ಇದ್ಯಾವುದರ ತಲೆಬಿಸಿಯೇ ಬೇಡ ಎಂದು ಒಂದು ದೊಡ್ಡ ವರ್ಗ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮನಸ್ಸು ಮಾಡುತ್ತಿದೆ. ಕೊಡಗಿನಲ್ಲೂ ಈ ಟ್ರೆಂಡ್ ಕಂಡುಬಂದಿದ್ದು ವರ್ಷದಿಂದ ವರ್ಷಕ್ಕೆ ಇಲ್ಲಿ ಹೆಚ್ಚಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಪ್ರಮಾಣವೇ ಇದಕ್ಕೆ ಸಾಕ್ಷಿ ಆಗಿದೆ.
ಕೊಡಗಿನಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ಕಂಡುಬರುವ ಮಳೆ, ಮೈ ನಡುಗಿಸುವ ಚಳಿ, ಬೆಟ್ಟಗುಡ್ಡಗಳ ಮೇಲಿನ ಏರಿಳಿತದ ರಸ್ತೆಗಳು, ವಿದ್ಯುತ್ ಸಮಸ್ಯೆ, ಎಲೆಕ್ಟ್ರಿಕ್ ವಾಹನಗಳ ಬಗೆಗಿನ ನಕರಾತ್ಮಕ ಅಂಶಗಳು… ಹೀಗೆ ಅನೇಕ ಕಾರಣಗಳಿಂದ ಕೊಡಗಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗೆಗಿನ ಕ್ರೇಜ್ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಇಂಥ ವಾಹನಗಳಿಗೆ ಸಂಬಂಧಿಸಿದಂತೆ ಸ್ಥಳೀಯರಲ್ಲಿ ನಿರಾಸಕ್ತಿ ಕಾಣಿಸುತ್ತಿತ್ತು. ನಂತರದ ದಿನಗಳಲ್ಲಿ ತಂತ್ರಜ್ಞಾನ ಬೆಳೆದಂತೆ ಇವಿಗಳಲ್ಲೂ ಸುಧಾರಣೆ ಕಂಡುಬರುತ್ತಿದ್ದು, ಎಲ್ಲಾ ಹವಾಮಾನ, ಭೌಗೋಳಿಕ ಪರಿಸ್ಥಿತಿಗಳಿಗೂ ಹೊಂದಿಕೆ ಆಗಬಹುದಾದ ವಾಹನಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಜಿಲ್ಲೆಯಲ್ಲೂ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಮನಸ್ಸು ಮಾಡಿದರು. ಮೊದಲು ಕುಶಾಲನಗರ ಭಾಗದಲ್ಲಿ ಕಾಣಿಸಿಕೊಂಡ ಇವಿಗಳು ನಂತರ ಜಿಲ್ಲೆಯಾದ್ಯಂತ ರಸ್ತೆಗೆ ಇಳಿಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಓಡಾಡುವುದನ್ನು ಕಾಣಬಹುದಾಗಿದೆ.
೨೦೧೯ರಲ್ಲಿ ಮಡಿಕೇರಿ ಆರ್‌ಟಿಒದಲ್ಲಿ ಕೇವಲ ೧ ಎಲೆಕ್ಟ್ರಿಕ್ ವಾಹನ ನೋಂದಣಿ ಆಗಿತ್ತು. ೨೦೨೦ರಲ್ಲಿ ೧೯, ೨೦೨೧ರಲ್ಲಿ ೩೨, ೨೦೨೨ರಲ್ಲಿ ೧೪೮, ೨೦೨೩ರಲ್ಲಿ ೩೨೦ ಎಲೆಕ್ಟ್ರಿಕ್ ವಾಹನಗಳು ನೋಂದಣಿ ಆಗಿದ್ದವು. ಈ ವರ್ಷ ಇಲ್ಲಿಯ ತನಕ ೨೦೨ ಇವಿಗಳು ನೋಂದಣಿ ಆಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು ೭೨೯ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಓಡಾಡುತ್ತಿವೆ. ೨೦೨೪ರಲ್ಲಿ ಕೇವಲ ೬ ತಿಂಗಳುಗಳಲ್ಲಿ ೨೦೨ ವಾಹನಗಳು ನೋಂದಣಿ ಆಗಿರುವುದು ಇದುವರೆಗಿನ ದಾಖಲೆಯಾಗಿದೆ.
ಈ ವರ್ಷ ಮಾರ್ಚ್‌ನಲ್ಲಿ ಅತಿ ಹೆಚ್ಚು ಎಂದರೆ ೬೮ ಎಲೆಕ್ಟ್ರಿಕ್ ವಾಹನಗಳು ಮಡಿಕೇರಿ ಆರ್‌ಟಿಒದಲ್ಲಿ ನೋಂದಣಿ ಆಗಿದೆ. ಜನವರಿಯಲ್ಲಿ ೪೨, ಫೆಬ್ರವರಿಯಲ್ಲಿ ೩೯, ಏಪ್ರಿಲ್‌ನಲ್ಲಿ ೨೩, ಮೇ ತಿಂಗಳಿನಲ್ಲಿ ೨೧ ಹಾಗೂ ಜೂನ್‌ನಲ್ಲಿ ಇಲ್ಲಿಯ ತನಕ ೯ ಇವಿಗಳು ಜಿಲ್ಲೆಯಲ್ಲಿ ನೋಂದಣಿ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಉಳಿದಿರುವ ಇನ್ನೂ ೬ ತಿಂಗಳುಗಳಲ್ಲಿ ಇಷ್ಟೇ ಪ್ರಮಾಣದಲ್ಲಿ ಅಥವಾ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇವಿಗಳು ರಸ್ತೆಗೆ ಇಳಿಯುವ ಬಗ್ಗೆ ವಾಹನ ಮಾರಾಟಗಾರರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕಳೆದ ವರ್ಷದ ಜೂನ್‌ನಿಂದ ಈಚೆಗೆ ಸರ್ಕಾರ ಸಬ್ಸಿಡಿ ಕಡಿತಗೊಳಿಸಿ, ಪ್ರೋತ್ಸಾಹಧನ ಕಡಿಮೆ ಮಾಡಿದ ಕಾರಣ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಮೊದಲಿಗಿಂತ ಹೆಚ್ಚಳ ಆಗಿದೆ. ಆದರೂ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ನಿರ್ವಹಣಾ ವೆಚ್ಚಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಮೂಲಕ ದೀರ್ಘಕಾಲಿನ ಲಾಭದ ಅವಕಾಶ ಇರುವುದರಿಂದ ವಾಹನ ಬಳಕೆದಾರರು ಇಂಥ ವಾಹನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ ಎನ್ನುವುದು ಎಲೆಕ್ಟ್ರಿಕ್ ವಾಹನಗಳ ಡೀಲರ್‌ಗಳ ಅಭಿಪ್ರಾಯ.
ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ, ಕೆಲವು ಎಲೆಕ್ಟ್ರಿಕ್ ವಾಹನಗಳಲ್ಲಿ ವರದಿಯಾದ ಬೆಂಕಿ ಆಕಸ್ಮಿಕಗಳು, ಕೆಲವು ಸಂಸ್ಥೆಗಳ ವಾಹನಗಳಿಗೆ ಸಂಬಂಧಿಸಿದಂತೆ ಸರ್ವಿಸ್‌ಗಳಲ್ಲಿ ಲೋಪ ಸೇರಿದಂತೆ ಕೆಲವೊಂದು ನ್ಯೂನತೆಗಳು, ಇತ್ತೀಚೆಗೆ ಈ ಬಗೆಯ ವಾಹನಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡ ಪ್ರತಿಕೂಲ ನಿರ್ಧಾರಗಳ ಋಣಾತ್ಮಕ ಅಂಶಗಳ ಮಧ್ಯೆಯೂ ಈಗ ಮತ್ತೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಾಹನ ಬಳಕೆದಾರರಲ್ಲಿ ಆಸಕ್ತಿ ಹೆಚ್ಚಾಗುತ್ತಿರುವುದು ಇವಿ ಉತ್ಪಾದಕರು ಮತ್ತು ಮಾರಾಟಗಾರರ ಪಾಲಿಗೆ ಉತ್ತಮ ಬೆಳವಣಿಗೆಯೇ ಆಗಿದೆ.
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಮತ್ತು ಮಾರಾಟ ತೀವ್ರಗೊಳಿಸುವ ಸಬ್ಸಿಡಿ ಯೋಜನೆ (ಫೇಮ್-೨) ರೂಪಿಸಿತ್ತು. ಮೂರು ವರ್ಷಗಳಿಗೆಂದು ೨೦೧೯ರಲ್ಲಿ ಆರಂಭಿಸಲಾಗಿದ್ದ ಫೇಮ್-೨ ಯೋಜನೆಯನ್ನು ೨೦೨೧ರಲ್ಲಿ ಮತ್ತೆ ಎರಡು ವರ್ಷಕ್ಕೆ ವಿಸ್ತರಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇದ್ದ ಸಬ್ಸಿಡಿಯನ್ನು ೨೦೨೩ರ ಜೂನ್‌ನಿಂದ ಕಡಿತಗೊಳಿಸಲಾಗಿದೆ. ಮೊದಲು ಪ್ರತಿ ಕಿಲೋ ವ್ಯಾಟ್‌ಗೆ ೧೫ ಸಾವಿರ ರೂ. ಸಬ್ಸಿಡಿ ಕೊಡಲಾಗುತ್ತಿತ್ತು. ಜೂನ್ ತಿಂಗಳಿನಲ್ಲಿ ೫ ಸಾವಿರ ರೂ. ಕಡಿತ ಮಾಡಲಾಗಿದ್ದು, ೧೦ ಸಾವಿರ ರೂ. ಸಬ್ಸಿಡಿ ಕೊಡಲಾಗುತ್ತಿದೆ. ಇದರ ಜತೆಗೆ ಇ-ದ್ವಿಚಕ್ರ ವಾಹನಗಳ ಖರೀದಿಗೆ ಕೊಡಲಾಗುತ್ತಿದ್ದ ಪ್ರೊತ್ಸಾಹ ಧನವನ್ನೂ ಸರ್ಕಾರ ಶೇ. ೧೫ಕ್ಕೆ ಇಳಿಸಿದೆ. ಮೊದಲು ಶೇ. ೪೦ರಷ್ಟು ಪ್ರೋತ್ಸಾಹಧನ ಕೊಡಲಾಗುತ್ತಿತ್ತು. ಇದು ಕೂಡ ಎಲೆಕ್ಟ್ರಿಕ್ ವಾಹನಗಳ ದರ ಹೆಚ್ಚಳಕ್ಕೆ ಕಾರಣವಾಗಿದೆ.
೨೦೨೧ರಿಂದ ನಾವು ಎಲೆಕ್ಟ್ರಿಕ್ ಕಾರು ಬಳಸುತ್ತಿದ್ದೇವೆ. ಸಾಂಪ್ರದಾಯಿಕ ಇಂಧನದ ವಾಹನಗಳಿಂದ ಉತ್ತಮ ಅನುಭವ ಈ ವಾಹನದಿಂದ ಸಿಗುತ್ತಿದೆ. ಹೆಚ್ಚುತ್ತಿರುವ ಪೆಟ್ರೋಲ್ ದರದಿಂದಾಗಿ ನಾವು ಎಲೆಕ್ಟ್ರಿಕ್ ಕಾರು ಕೊಂಡುಕೊಂಡೆವು. ಈ ವಾಹನ ಪರಿಸರಕ್ಕೆ ಪೂರಕವಾಗಿದ್ದು ನಿರ್ವಹಣಾ ವೆಚ್ಚ ಕೂಡ ಕಡಿಮೆ ಇರುವುದರಿಂದ ಅನುಕೂಲ ಆಗಿದೆ. ಜವಾಬ್ದಾರಿಯುತ ನಾಗರಿಕರಾಗಿ ನಮ್ಮಿಂದಾಗುವ ವಿದೇಶಿ ವಿನಿಮಯ ಉಳಿಸಿದ ಹೆಮ್ಮೆಯೂ ನಮಗಿದೆ.
ಕವಿತಾ ಶ್ರೀಧರ್, ಎಲೆಕ್ಟ್ರಿಕ್ ವಾಹನದ ಮಾಲೀಕರು
ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಮಿತವ್ಯಯ ಸಾಧ್ಯವಾಗಿದೆ. ನಮ್ಮಲ್ಲಿ ಟೂ ವೀಲರ್ ಬಳಸುತ್ತಿದ್ದೇವೆ. ಪೆಟ್ರೋಲ್‌ಗೆ ಹಣ ಖರ್ಚು ಮಾಡುವ ತಲೆ ನೋವು ಇಲ್ಲದೆ ಈ ವಾಹನದಲ್ಲಿ ಆರಾಮವಾಗಿ ಸುತ್ತಾಡುತ್ತೇವೆ. ನಿರ್ವಹಣಾ ವೆಚ್ಚವೂ ಕಡಿಮೆ ಇರುವುದರಿಂದ ನಮಗೆ ಅನುಕೂಲವೇ ಆಗಿದೆ.
ಗುಡ್ಡೆಮನೆ ಯೋಗಾನಂದ, ಎಲೆಕ್ಟ್ರಿಕ್ ವಾಹನದ ಮಾಲೀಕ