ಹುಲಿಗಳ ಉಪಟಳಕ್ಕೆ ಹೈರಾಣಾಗಿರುವ ಜನತೆ

14SARAG 1
Published on

ಸರಗೂರು: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಹುಲಿಗಳ ಉಪಟಳ ಜೋರಾಗಿದ್ದು, ಜನತೆ ದನ-ಕರುಗಳನ್ನು ಮೇಯಿಸಲು, ಜಮೀನುಗಳಿಗೆ ತೆರಳಲು ಭಯಪಡುತತ್ತಿದ್ದಾರೆ. ಯಾವ ಕ್ಷಣದಲ್ಲಾದರೂ ವ್ಯಾಘ್ರ ಮೇಲೆ ಎರಗಬಹುದೆಂಬ ಜೀವಭಯದಿಂದ ದಿನ ದೂಡುತ್ತಿದ್ದಾರೆ.


ಹಂಚೀಪುರ ಗ್ರಾಮದ ಸುತ್ತಮುತ್ತ ಹುಲಿ ಪ್ರತ್ಯಕ್ಷವಾಗಿದ್ದು, ಅದರ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಗಮನಕ್ಕೆ ಬಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿ ಕ್ಯಾಮರಾ ಅಳವಡಿಸಿದ್ದರೂ ಕ್ಯಾಮರಾದ ಕಣ್ಣಿಗೆ ಸೆರೆಯಾಗಿಲ್ಲ. ಗ್ರಾಮದ ರೈತ ಶೇಷಣ್ಣ ಅವರು ಜಮೀನಿಗೆ ಹೋಗುವಾಗ ಹುಲಿ ಪ್ರತ್ಯಕ್ಷವಾಗಿದ್ದು, ಗಾಬರಿಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.


ಇದಕ್ಕೂ ಮೊದಲು ಹಂಚೀಪುರ ಗ್ರಾಮದ ಮಲ್ಲಿಕಾರ್ಜುನಪ್ಪ ಅವರು ಹಸುಗಳನ್ನು ಮೇಯಿಸುತ್ತಿದ್ದಾಗ ಹುಲಿ ಕಾಣಿಸಿಕೊಂಡಿದೆ. ಮತ್ತೊಂದು ದಿನ ಗ್ರಾಮದ ಕೆರೆ ಪಕ್ಕದಲ್ಲಿರುವ ಅರಳಿಮರದ ಕೆಳಗೆ ಮಲಗಿರುವಾಗ ಹುಲಿ ಘರ್ಜನೆ ಮಾಡಿದೆ. ಇದರಿಂದ ಹೆದರಿದ ಮಲ್ಲಿಕಾರ್ಜುನಪ್ಪ ಭಯದಿಂದ ಓಡಿ ಮನೆ ಸೇರಿಕೊಂಡಿದ್ದಾರೆ, ಹಸುಗಳು ಸ್ಥಳದಿಂದ ಪರಾರಿಯಾಗಿವೆ.


ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಮ್ಮ ಜಮೀನುಗಳಿಗೆ ಹೋಗಲು ರೈತರು ಆತಂಕಗೊಂಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ, ಕಾರ್ಯಾಚರಣೆ ನಡೆಸಿ ಹುಲಿ ಸೆರೆಗೆ ಮುಂದಾಗಬೇಕು ಎಂದು ರೈತರು ಮನವಿ ಮಾಡಿದ್ದಾರೆ.


ಹಂಪಾಪುರದಲ್ಲೂ ಹುಲಿ ಪ್ರತ್ಯಕ್ಷ: ಸಮೀಪದ ಹಂಪಾಪುರ-ಮದ್ದೂರು ಗ್ರಾಮಗಳ ಸಂಪರ್ಕ ರಸ್ತೆಯ ಮಧ್ಯೆದಲ್ಲಿ ಎರಡು ದಿನಗಳ ಹಿಂದೆಯಷ್ಟೆ ರಾತ್ರಿ 8.30ರಲ್ಲಿ ಹುಲಿ ರಸ್ತೆ ದಾಟುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿರುವ ಪೋಟೋ ವೈರಲ್ ಆಗಿತ್ತು. ಇದರಿಂದಾಗಿ ಹಂಪಾಪುರ ಗ್ರಾಮದ ಆಸು-ಪಾಸಿನ ಜನತೆ ಹುಲಿ ಭಯದಲ್ಲಿದ್ದಾರೆ.


ಇದಲ್ಲದೆ ಕೋಹಳ ಗ್ರಾಮದ ಕೆಲ ಜಮೀನುಗಳಲ್ಲಿ ಹುಲಿ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು, ಈ ಭಾಗದ ರೈತರು ಆತಂಕದಲ್ಲಿದ್ದಾರೆ. ಗ್ರಾಮದ ಸಮೀಪದಲ್ಲಿಯೇ ಫಾರ್ಮ್ ಹೌಸ್‌ಗಳಿದ್ದು, ಹುಲಿ ಘರ್ಜನೆ ಮಾಡಿಕೊಂಡು ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹುಲಿ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net