

ಕರೊನಾ ಸೋಂಕಿನ ಹಾವಳಿ ಮತ್ತು ಅದನ್ನು ನಿಯಂತ್ರಿಸಲು ವಿಧಿಸಲಾಗಿದ್ದ ದಿಗ್ಬಂಧನದ ಪರಿಣಾಮ ಆರ್ಥಿಕತೆ ನೆಲಕಚ್ಚಿ ಎಲ್ಲ ವಲಯಗಳು, ಅದರಲ್ಲೂ ಜನಸಾಮಾನ್ಯರು ಪರದಾಡುವಂತಾಗಿದೆ. ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ದೇಶದ ಕೋಟ್ಯಂತರ ಕುಟುಂಬಗಳಿಗೆ ಕಾಡುತ್ತಿದೆ. ಪರಿಹಾರದ ದಾರಿ ಇನ್ನೂ ತೆರೆದುಕೊಂಡಿಲ್ಲ. ಹೀಗಿರುವಾಗ ಬೆಲೆಏರಿಕೆಯ ಬಿಸಿ ಜನಸಾಮಾನ್ಯರ ಗಾಯಕ್ಕೆ ಬರೆ ಎಳೆದಂತಾಗಿದೆ. ದೇಶದಾದ್ಯಂತ ಸತತ ಎಂಟನೇ ದಿನ ಇಂಧನ ದರ ಹೆಚ್ಚಳಗೊಂಡಿದೆ. ಭಾನುವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 62 ಪೈಸೆ ಹಾಗೂ ಡೀಸೆಲ್ 64 ಪೈಸೆ ಏರಿಕೆ ಕಂಡಿದೆ. ಈ ಮೂಲಕ 8 ದಿನಗಳಲ್ಲಿ ಪೆಟ್ರೋಲ್ ಒಟ್ಟು 4.54 ರೂ. ಹಾಗೂ ಡೀಸೆಲ್ 4.64 ರೂ. ಹೆಚ್ಚಳಗೊಂಡಿದೆ. ಸಾಮಾನ್ಯ ವಾಹನ ಸವಾರರಿಗೆ ಮತ್ತು ಸಾರಿಗೆ ಕ್ಷೇತ್ರವನ್ನೇ ನಂಬಿಕೊಂಡಿರುವವರಿಗೆ ಆಘಾತ ಎದುರಾಗಿದ್ದು, ಚಿಂತೆ ಹೆಚ್ಚಿಸಿದೆ.
ಕರೊನಾದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಎರಡು ದಶಕಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು. ಆದರೀಗ, ಮತ್ತೆ ಏರಿಕೆ ಕಾಣುತ್ತಿದ್ದು, ಅದರಂತೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿದೆ.
ಆದರೆ, ಕಚ್ಚಾತೈಲ ಬೆಲೆ ಕುಸಿದಾಗ ಸರ್ಕಾರ ಅದರ ಲಾಭವನ್ನು ಜನರಿಗೆ ವರ್ಗಾಯಿಸಲೇ ಇಲ್ಲ. ಆ ದಿನಗಳಲ್ಲೂ ಜನಸಾಮಾನ್ಯರು ಎಂದಿನ ದರಭಾರವನ್ನೇ ಎದುರಿಸಬೇಕಾಯಿತು. ಕರೊನಾದಿಂದ ಆಗುವ ನಷ್ಟವನ್ನು ಸಮತೋಲನ ಮಾಡಿಕೊಳ್ಳುವ ಭರದಲ್ಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮಾರ್ಚ್ 14ರಂದು ಹೆಚ್ಚುವರಿಯಾಗಿ 3 ರೂ. ಸುಂಕ ವಿಧಿಸಿತು. ಪ್ರಸಕ್ತ ಕಚ್ಚಾತೈಲ ಬೆಲೆ ಹೆಚ್ಚಳದಿಂದ ಸುಂಕದ ಹೊರೆಯನ್ನು ಗ್ರಾಹಕರು ಅನುಭವಿಸುವಂತಾಗಿದೆ.
ಕರೊನಾ ಸೋಂಕು ವ್ಯಾಪಿಸದಂತೆ ವೈಯಕ್ತಿಕ ಅಂತರ ಕಾಯ್ದುಕೊಳ್ಳಲು ಸಾರಿಗೆ ಸಂಸ್ಥೆಗಳು ಪ್ರಯಾಣಿಕರ ಸಂಖ್ಯೆಯನ್ನು ಇಳಿಕೆ ಮಾಡಿವೆ. ಈ ನಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅಂಥದ್ದರಲ್ಲಿ ಇಂಧನ ದರ ಹೆಚ್ಚಳಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಸರಕು ಸಾಗಣೆ ವಾಹನಗಳಿಗೂ ಈ ಬೆಲೆಏರಿಕೆ ಬಿಸಿ ತಟ್ಟಿರುವುದರಿಂದ, ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಬಹುದಲ್ಲದೆ ಸರಕುಗಳು ತುಟ್ಟಿಯಾಗುವ ಸಾಧ್ಯತೆ ಇದೆ. ಉದ್ಯೋಗ ನಷ್ಟ, ವೇತನ ಕಡಿತದ ಸಮಸ್ಯೆಯಲ್ಲಿ ಸಿಲುಕಿರುವ ಜನಸಾಮಾನ್ಯರಿಗೂ ಇದು ಸಮಸ್ಯೆ ತಂದೊಡ್ಡಿದೆ.
ಕಚ್ಚಾತೈಲ ಬೆಲೆ ಇಳಿಕೆಯಾದಾಗ ಅದರ ಲಾಭವನ್ನು ಜನಸಾಮಾನ್ಯರಿಗೆ ವರ್ಗಾ ಯಿಸದೆ ಸುಂಕ ಹೆಚ್ಚಳದ ಮೂಲಕ ಬೊಕ್ಕಸ ತುಂಬಿಸಿಕೊಳ್ಳಲು ಮುಂದಾದ ಸರ್ಕಾರ ಜನಹಿತವನ್ನು ಮರೆತುಬಿಟ್ಟಿತೇ? ಇಂಧನ ದರ ಹೆಚ್ಚಳವಾಗುತ್ತಿರುವಾಗ ಸುಂಕ ಕಡಿತಗೊಳಿಸಿ, ಬೆಲೆ ತಗ್ಗಿಸುವ ಕ್ರಮವನ್ನು ಸರ್ಕಾರ ತುರ್ತಾಗಿ ಕೈಗೊಳ್ಳಬೇಕು.
ಈ ಸಂಕಷ್ಟದ ಹೊತ್ತಲ್ಲೂ ಜನಸಾಮಾನ್ಯರ ಮೇಲೆ ಬೆಲೆಏರಿಕೆಯ ಭಾರ ಹಾಕುತ್ತಿರುವುದು ಸರಿಯಲ್ಲ. ಇಂಧನ ದರ ಏರಿಕೆ ಮತ್ತೆ ಕೆಲ ದಿನ ಮುಂದುವರಿದರೆ ಜನಸಾಮಾನ್ಯರೂ ಸೇರಿ ಸಾರಿಗೆ, ಸರಕು ಸಾಗಣೆಯಂಥ ಕ್ಷೇತ್ರಗಳು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಒಂದೆಡೆ ಪ್ಯಾಕೇಜ್ ಘೋಷಿಸುವ ಸರ್ಕಾರ ಮತ್ತೊಂದೆಡೆ ಬೆಲೆಏರಿಕೆಯ ಭಾರವನ್ನು ಹಾಕಿದರೆ ಆರ್ಥಿಕ ಸಂಕಷ್ಟ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಹಾಗಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಜನರ ಹಿತಕ್ಕೆ ಆದ್ಯತೆ ನೀಡಲಿ. ತೈಲಾಘಾತವನ್ನು ತಡೆಗಟ್ಟಲು ಮುಂದಾಗಲಿ.