ಜನ ಬದಲಾವಣೆ ಬಯಸಿದ್ದರಿಂದಲೇ ಮತದಾನ ಪ್ರಮಾಣ ಹೆಚ್ಚಾಗಿದೆ: ತೇಜಸ್ವಿ ಯಾದವ್​ | Tejashwi Yadav

Tejashwi yadav
Published on

ಪಾಟ್ನಾ: ಬಿಹಾರದ ಮೊದಲ ಹಂತದ ಚುನಾವಣೆಯಲ್ಲಿನ ದಾಖಲೆಯ ಮತದಾನದ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಮಹಾಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejashwi Yadav)​, ಜನರು ಬದಲಾವಣೆ ಬಯಸಿ ಈ ಮಟ್ಟದಲ್ಲಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಎನ್​ಡಿಟಿವಿಯೊಂದಿಗೆ ಮಾತನಾಡಿದ ತೇಜಸ್ವಿ, ನನಗೆ ಅನೇಕ ಕಡೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತಿದ್ದು, ರಾಜ್ಯದ ಜನರು ಬದಲಾವಣೆಯನ್ನು ಬಯಸಿ ಮತ ಹಾಕಿದ್ದಾರೆ. ಭ್ರಷ್ಟಾಚಾರ ಮುಕ್ತ ಬಿಹಾರ ಅವರ ಆದ್ಯತೆಯಾಗಿದ್ದು, ಬಿಹಾರವು ಐಟಿ, ಜವಳಿ, ಆಹಾರ ಸಂಸ್ಕರಣೆ, ಕೃಷಿ ಆಧಾರಿತ ಉದ್ಯಮದ ಕೇಂದ್ರವಾಗಬೇಕು ಎನ್ನುವ ಇಚ್ಛೆಯಿಂದ ಮತ ನೀಡಿದ್ದಾರೆ ಎಂದರು.

ಆರ್‌ಜೆಡಿ ಮತ್ತೆ ಅಧಿಕಾರಕ್ಕೆ ಬಂದರೆ, "ಗುಂಡಾ ರಾಜ್" ದಿನಗಳು ಮತ್ತೆ ಬರುತ್ತವೆ ಎನ್ನುವ ಮಹಿಳಾ ಮತದಾರರ ಆತಂಕದ ಕುರಿತಾಗಿ ಮಾತನಾಡಿದ ಯಾದವ್​, ಬಿಜೆಪಿ ಇದನ್ನು ಜನರ ಮೇರೆ ಹೇರಲು ಪ್ರಯತ್ನಿಸುತ್ತಿದ್ದು, ಆದರೆ ಜನರು ಇದಕ್ಕೆ ಸೊಪ್ಪು ಹಾಕಿಲ್ಲ. ಬಿಜೆಪಿ ನಾಯಕರುಗಳು, 30-35 ವರ್ಷಗಳ ಹಿಂದೆ ಏನಾಯಿತು ಎನ್ನುವ ವಿಷಯವನ್ನಿಟ್ಟುಕೊಂಡು ಮಾತನಾಡುತ್ತಾರೆ, ಆದರೆ ಇಂದು ಏನಾಗುತ್ತಿದೆ ಎನ್ನುವುದರ ಬಗ್ಗೆ ಅವರಿಗೆ ಯಾವುದೇ ಕಲ್ಪನೆ ಇಲ್ಲ ಎಂದು ಹೇಳಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಬಿಹಾರವು ಅಗ್ರ ಎರಡು ರಾಜ್ಯಗಳಲ್ಲಿ ಸ್ಥಾನ ಪಡೆದಿದ್ದು, ಮೊದಲನೆಯದ್ದು ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶ, ಆದರೆ ಇತ್ತ ಅಭಿವೃದ್ಧಿಯಲ್ಲಿ ಅಗ್ರ ಐದು ರಾಜ್ಯಗಳು ಬಿಜೆಪಿಯಿಂದ ಆಳಲ್ಪಡುತ್ತವೆ ಎಂಬ ಮತ್ತೊಂದು ಕಥೆಯನ್ನು ಅವರು ಹೇಳಿಕೊಂಡು ತಿರುಗಾಡುತಿದ್ದಾರೆ. ಜನರು ಬಿಜೆಪಿಯ ಪ್ರಚಾರವನ್ನು ಅರ್ಥಮಾಡಿಕೊಂಡಿದ್ದು. ಇನ್ನು ಮುಂದೆ ರಾಜ್ಯದ ಜನ ತಮ್ಮ ಭವಿಷ್ಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದರು.

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕುರಿತಾದ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ, ಅವರ ಪಕ್ಷ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವನ್ನು ಸಹ ಜನ ತಿರಸ್ಕರಿಸಿದ್ದು, ಇಲ್ಲಿ ಸ್ಪರ್ಧೆ ನಡೆಯುತ್ತಿರುವುದು ಎನ್​ಡಿಎ ಮತ್ತು ಮಹಾಘಟಬಂದನ್​ ನಡುವೆ ಮಾತ್ರ ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net