ಶಾಂಘೈನಲ್ಲಿ ಕಠಿಣ ನಿಯಮಕ್ಕೆ ರೋಸಿದ ಜನ; ರಾತ್ರಿ ಕದ್ದುಮುಚ್ಚಿ ಆಹಾರ ವಿನಿಮಯ, ಆಹಾರ ಲೂಟಿ

Shanghai
Published on

ಬೀಜಿಂಗ್: ಎರಡೂವರೆ ಕೋಟಿ ಜನಸಂಖ್ಯೆಯ ಚೀನಾದ ಬೃಹತ್ ನಗರ ಶಾಂಘೈನಲ್ಲಿ ಕರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟು ನಿಯಮಗಳನ್ನು ಜಾರಿಗೆ ತರಲಾಗಿದೆ. ಮೂರು ವಾರದಿಂದ ಲಾಕ್​ಡೌನ್​ನಲ್ಲಿರುವ ನಗರದಲ್ಲಿ ನಿಯಮ ಮುರಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಇದನ್ನು ತಪ್ಪಿಸಿಕೊಳ್ಳಲು ಜನರು ಕದ್ದುಮುಚ್ಚಿ ರಾತ್ರಿ ಹೊತ್ತು ಓಡಾಡುತ್ತಿದ್ದಾರೆ. ಆಹಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಶಾಂಘೈನಲ್ಲಿ ಲಾಕ್​ಡೌನ್ ಕಾರಣ ಸ್ಥಳೀಯ ಆಡಳಿತವೇ ಮನೆ ಮನೆಗೆ ಆಹಾರ ವಿತರಣೆ ಜವಾಬ್ದಾರಿ ತೆಗೆದುಕೊಂಡಿದೆ. ಆದರೆ, ಇದು ಸಮರ್ಪಕವಾಗಿ ನಡೆಯುತ್ತಿಲ್ಲ. ಆಹಾರ ಕೊರತೆ ಉಂಟಾಗಿದ್ದು, ಇದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೆಡೆ ಆಹಾರ ಲೂಟಿ ಮಾಡಲಾಗುತ್ತಿದೆ.

ಲಾಕ್​ಡೌನ್ ನಿಯಮ ಮುರಿದವರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ನಾಯಿಯ ಜತೆ ವಾಕಿಂಗ್ ಮಾಡುವಂತಿಲ್ಲ, ದಂಪತಿ ಒಟ್ಟಿಗೆ ಮಲಗುವಂತಿಲ್ಲ... ಇತ್ಯಾದಿ ನಿಯಮದಿಂದ ಜನರು ರೋಸಿ ಹೋಗಿದ್ದಾರೆ. ಪ್ರತಿಭಟನೆ ಹೆಚ್ಚಾಗಿದೆ. ಪೊಲೀಸರು ನಿಯಮದ ಹೆಸರಿನಲ್ಲಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಶಾಂಘೈನಲ್ಲಿ ಸೋಮವಾರ 26,087 ಹೊಸ ಕೇಸ್​ಗಳು ಕಂಡುಬಂದಿದ್ದು, ಇದರಲ್ಲಿ 914ರಲ್ಲಿ ಮಾತ್ರ ಕರೊನಾ ಸೋಂಕಿನ ಗುಣಲಕ್ಷಣ ಇದೆ. ಈ ಮಧ್ಯೆ, ಶಾಂಘೈನ ಕೆಲವು ಭಾಗಗಳಲ್ಲಿ ನಿರ್ಬಂಧವನ್ನು ಕೊಂಚ ಸಡಿಲಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆರು ಸುತ್ತಿನ ಸಾಮೂಹಿಕ ಪರೀಕ್ಷೆ ಮುಗಿದಿರುವ 16 ಪ್ರದೇಶಗಳಲ್ಲಿ ನಿಯಮವನ್ನು ತುಸು ಸಡಿಲಗೊಳಿಸಲಾಗಿದೆ. ಇಲ್ಲಿ ಕಳೆದ 14 ದಿನಗಳಿಂದ ಹೊಸ ಪ್ರಕರಣಗಳು ಕಂಡು ಬಂದಿಲ್ಲ. 7,565 ಪ್ರದೇಶಗಳನ್ನು ಮುನ್ನೆಚ್ಚರಿಕಾ ವಲಯಗಳೆಂದು ಘೋಷಿಸಲಾಗಿದೆ.

ಲಸಿಕೆ ಬೆಲೆ ವ್ಯತ್ಯಾಸಕ್ಕೆ ಹೊಂದಾಣಿಕೆ: ಮೂರನೇ ಡೋಸ್​ಗೆ ಲಸಿಕೆಯ ದರವನ್ನು ಸರ್ಕಾರ 225 ರೂ.ಗೆ ಇಳಿಸಿರುವುದರಿಂದ ( ಲಸಿಕೆ ಪಡೆಯುವವರು 150 ರೂ. ಸೇವಾಶುಲ್ಕ ಪ್ರತ್ಯೇಕ ಕೊಡಬೇಕಾಗುತ್ತದೆ) ವ್ಯತ್ಯಾಸ ಆಗುವ ಹಣವನ್ನು ದಾಸ್ತಾನಿನಲ್ಲಿರುವ ಎಕ್ಸ್​ಪೈರಿ ಆಗದ ಲಸಿಕೆಗೆ ಹೊಂದಾಣಿಕೆ ಮಾಡುವುದಾಗಿ ಪುಣೆ ಮೂಲದ ಸೆರಂ ಸಂಸ್ಥೆ ಹೇಳಿದೆ. ಹೈದರಾಬಾದ್ ಮೂಲದ ಬಯೋಟೆಕ್ ಕೊವ್ಯಾಕ್ಸಿನ್​ನ ಬಾಕಿ ಇರುವ ದಾಸ್ತಾನಿಗೆ ದರ ಹೊಂದಾಣಿಕೆ ಮಾಡುವುದಾಗಿ ಹೇಳಿದೆ. ಮೂರನೇ ಡೋಸ್​ನ ಕೋವಿಶೀಲ್ಡ್ ಲಸಿಕೆಗೆ ಸೆರಂ 600 ರೂ. ನಿಗದಿ ಮಾಡಿದ್ದರೆ, ಕೊವ್ಯಾಕ್ಸಿನ್​ಗೆ ಭಾರತ್ ಬಯೋಟೆಕ್ 1,200 ರೂ. ನಿಗದಿ ಮಾಡಿತ್ತು. ಸರ್ಕಾರ ಇದನ್ನು ಇಳಿಕೆ ಮಾಡಿತ್ತು.

ಕೇರಳದಲ್ಲಿ ಅಧಿಕ ಬೆಲೆಗೆ ಖರೀದಿ: ವೈಯಕ್ತಿಕ ರಕ್ಷಣೆಯ ಸಾಧನ (ಪಿಪಿಇ)ವನ್ನು ಮಾರುಕಟ್ಟೆ ಬೆಲೆಗಿಂತ ಮೂರುಪಟ್ಟು ಹೆಚ್ಚಿನ ದರಕ್ಕೆ ಖರೀದಿಸಲು ಕೇರಳ ಸರ್ಕಾರ 2020ರಲ್ಲಿ ಒಪ್ಪಿಗೆ ನೀಡಿತ್ತು ಎಂಬ ಅಂಶ ಆರ್​ಟಿಐ ಅರ್ಜಿಗೆ ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. ಪ್ರತಿ ಪಿಪಿಇ ಕಿಟ್ ಅನ್ನು 304.50 ರೂ. ಮತ್ತು 446.25 ದರದ ಪ್ರಮಾಣದಲ್ಲಿ ನೀಡಲು ಪ್ರಸ್ತಾವನೆಗಳು ಬಂದಿದ್ದರೂ, 1,550 ರೂ.ಗೆ ಖರೀದಿಸಲಾಗಿದೆ ಎಂದು ಗೊತ್ತಾಗಿದೆ. ಕರೊನಾ ತಡೆ ಸಂಬಂಧ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆಪಾದನೆಗೆ ಹಿಂದಿನ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಗುರಿಯಾಗಿದ್ದರು.

ಗುವಾಂಗ್ಝೌನಲ್ಲಿ ನಿರ್ಬಂಧ: ಚೀನಾದ ತಯಾರಿಕಾ ವಲಯದ ಹಬ್ ಆಗಿರುವ ಗುವಾಂಗ್ಝೌನಲ್ಲಿ ಹೊರಗಿನಿಂದ ಬರುವವರನ್ನು ಬಹುತೇಕ ನಿರ್ಬಂಧಿಸಲಾಗಿದೆ. ದೇಶದ ಬೇರೆ ಕಡೆಗಳಲ್ಲಿ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಈ ಕ್ರಮ ಕೈಗೊಂಡಿದೆ. ಚೀನಾಕ್ಕೆ ಒಳಪಟ್ಟ ಹಾಂಕಾಂಗ್ ಸ್ವಾಯತ್ತ ಪ್ರದೇಶದಲ್ಲಿ 27 ಹೊಸ ಪ್ರಕರಣಗಳು ಕಂಡುಬಂದಿದ್ದು, ಸ್ಥಳೀಯ ಆಡಳಿತ ಸೋಂಕು ತಡೆಗೆ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದೆ.

ಭಾರತದಲ್ಲಿ 861 ಹೊಸ ಕೇಸ್: ಭಾರತದಲ್ಲಿ ಸೋಮವಾರ ಬೆಳಗ್ಗೆಗೆ ಕೊನೆಗೊಂಡ ದಿನದಲ್ಲಿ 861 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 4,30,36,132ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 11,058ಕ್ಕೆ ಇಳಿದಿವೆ. ಆರು ಮಂದಿ ಸಾವನ್ನಪ್ಪಿದ್ದು, ಸಾವಿನ ಒಟ್ಟು ಸಂಖ್ಯೆ 5,21,691ಕ್ಕೆ ಹೆಚ್ಚಳವಾಗಿದೆ. ಪಾಸಿಟಿವಿಟಿ ದರ ಶೇ. 0.03 ಇದೆ. ಚೇತರಿಕೆ ಪ್ರಮಾಣ ಶೇ. 98.76 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೊಸ ತಳಿ ಸೋಂಕು ಕಳವಳಕಾರಿಯಲ್ಲ: ಕರೊನಾ ಸೋಂಕಿನ ಒಮಿಕ್ರಾನ್ ಉಪಪ್ರಭೇದ ಎಕ್ಸ್​ಇ ಕಳವಳಕಾರಿಯಲ್ಲ. ಆದರೂ ಈ ತಳಿಯ ಬಗ್ಗೆ ನಿಗಾ ಇರಿಸಲಾಗಿದೆ. ದೆಹಲಿಯಲ್ಲಿ ಈ ಪ್ರಭೇದದ ಒಂದೂ ಪ್ರಕರಣ ಪತ್ತೆಯಾಗಿಲ್ಲ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೋಮವಾರ ಹೇಳಿದ್ದಾರೆ. ಉಪತಳಿಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ದೆಹಲಿಯಲ್ಲಿ ಕೆಲ ದಿನಗಳಿಂದ ಸೋಂಕು ಪಕ್ರರಣ ಮತ್ತು ಪಾಸಿಟಿವಿಟಿ ದರದಲ್ಲಿ ತುಸು ಹೆಚ್ಚಾಗಿದೆ. ಪ್ರಸರಣವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ದೆಹಲಿಯಲ್ಲಿ 141 ಹೊಸ ಪ್ರಕರಣಗಳು ಕಂಡುಬಂದಿದ್ದು, ಪಾಸಿಟಿವಿಟಿ ದರ ಶೇ. 1.29ಕ್ಕೆ ಏರಿದೆ. ಈ ಮಧ್ಯೆ, ಗುಜರಾತ್​ನಲ್ಲಿ ಕಂಡುಬಂದ ಎಕ್ಸ್​ಇ ಪ್ರಕರಣದ ಸ್ಯಾಂಪಲ್​ನ ಜಿನೋಮಿಕ್ ಸಿಕ್ವೆನ್ಸ್ ವಿಶ್ಲೇಷಣೆ ನಡೆಯುತ್ತಿದೆ. ಇದು ಮುಗಿದ ನಂತರ ಇದರ ಕಾರಕತ್ವದ ಮಾಹಿತಿ ಸಿಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಎಕ್ಸ್​ಇ ರೂಪಾಂತರಿ ಮೊದಲು ಪತ್ತೆಯಾಗಿದ್ದು ಬ್ರಿಟನ್​ನಲ್ಲಿ. ಇದು ಉಳಿದೆಲ್ಲ ಕರೊನಾ ಪ್ರಭೇದಕ್ಕಿಂತ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಎಕ್​ಇ ತಳಿಯು ಒಮಿಕ್ರಾನ್​ನ ಪ್ರಭೇದದ ಬಿಎ.1 ಮತ್ತು ಬಿಎ.2 ಉಪತಳಿಗಳ ಮಿಶ್ರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net