ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟಕ್ಕೆ ಜನ ಹೈರಾಣ

klr sun
ಬಿಸಿಲಿನ ಕಿರಣ ಬೀಳುತ್ತಿರುವ ದೃಶ್ಯ.
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ದಿನೇದಿನೆ ಜೋರಾಗುತ್ತಿದ್ದು, ಮನೆಯಿಂದ ಹೊರಗೆ ಬರಲು ಜನ ಹೈರಾಣರಾಗುವಂತಾಗಿದೆ.

ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಬಿಸಿಲಿನ ತಾಪಮಾನವು 40 ಡಿಗ್ರಿ ಸೆಲ್ಶಿಯಸ್​ ಗಡಿ ದಾಟಲಿದ್ದು, ಈಗಲೇ ಜಿಲ್ಲೆಯಲ್ಲಿ 30 ರಿಂದ 31ರಷ್ಟು ಡಿಗ್ರಿ ಸೆಲ್ಶಿಯನ್ಸ್​ ನಷ್ಟಿಯಿದ್ದು, ಕಳೆದ ವರ್ಷಕ್ಕಿಂತ ಇನ್ನೂ ಹೆಚ್ಚಾಗುವ ಆತಂಕ ಜನತೆಯಲ್ಲಿ ಕಾಡುತ್ತಿದೆ.

ಹಗಲೆಲ್ಲ ಸುಡು ಬಿಸಿಲಿದ್ದರೆ, ರಾತ್ರಿ ಸೆಕೆಗೆ ಜನ ಬೇಸತ್ತಿದ್ದಾರೆ. ಸೆಕೆಯಿಂದ ರಕ್ಷಣೆ ಪಡೆಯಲು ಫ್ಯಾನ್​, ಕೂಲರ್​, ಎಸಿ ಮೊರೆ ಹೋಗಿಗುವಂತಾಗಿದೆ. ಇದರ ವ್ಯವಸ್ಥೆಯಿಲ್ಲದವರು ಮನೆಯ ಮೇಲೆ, ಹೊರಗಡೆ ಮಲಗುವ ಅಭ್ಯಾಸ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

ಬೆಳಗ್ಗೆ 9 ಗಂಟೆಯ ನಂತರ ಮನೆಯಿಂದ ಹೊರ ಬರುವುದೇ ದುಸ್ಸಾಹಸವಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಕಚೇರಿಗಳಿಗೆ ಅಧಿಕಾರಿಗಳು ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಪರದಾಡುವಂತಾಗಿದೆ.

ತೀವ್ರ ಬಿಸಿಲಿನ ಕಾರಣ ಜನರಲ್ಲಿ ವಿಪರೀತ ಸುಸ್ತು ಕಾಣಿಸಿಕೊಳ್ಳುತ್ತಿದೆ. ಜತೆಗೆ ಜ್ವರ, ತಲೆನೋವು ಮೈ ಕೈ ನೋವು ಸಾಮಾನ್ಯವಾಗಿದೆ. ಇನ್ನೊಂದೆಡೆ ಮನೆಗಳಲ್ಲಿ ಎಸಿ ಅಥವಾ ಫ್ಯಾನ್​ ಇರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲೆಕ್ಟಾ$ನಿಕ್ಸ್​ ಅಂಗಡಿಗಳಲ್ಲೂ ಎಸಿ, ಕೂಲರ್​ ಮತ್ತು ಫ್ಯಾನ್​ಗಳಿಗೆ ಭಾರಿ ಡಿಮಾಂಡ್​ ಹೆಚ್ಚಿದೆ. ನಿತ್ಯ ನೂರಾರು ಫ್ಯಾನ್​ ಮತ್ತು ಎಸಿಗಳು ಮಾರಾಟವಾಗುತ್ತಿವೆ. ಬಿಸಿಯಿಂದ ಪಾರಾಗಲು ಜನರು ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ತಂಪು ಪಾನಿಯಗಳತ್ತ ಮೋರೆ ಹೋಗಿದ್ದಾರೆ.

* ಆರೋಗ್ಯ ಮುಖ್ಯ

ಬಿಸಿಲಿನ ತಾಪ ಏರಿಕೆಯಿಂದಾಗಿ ಬಿಸಿ ಗಾಳಿ, ಶಾಖ ತರಂಗದ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

* ಆಗುವ ಸಮಸ್ಯೆಗಳೇನು..?

ತಲೆ ಸುತ್ತುವುದು, ತಲೆ ನೋವು, ಪ್ರೆ ತಪ್ಪುವುದು, ವಾಕರಿಕೆ ಅಥವಾ ವಾಂತಿಯಾಗುವುದು, ಏರುಗತಿಯ ಉಸಿರಾಟ ಹಾಗೂ ಹೃದಯದ ಬಡಿತ, ಕೆಲವು ಸಂದರ್ಭಗಳಲ್ಲಿ ಅತಿಯಾದ ಉಷ್ಣತೆಯಿಂದ ಪಾರ್ಶ್ವವಾಯು ಉಂಟಾಗಬಹುದು.

* ಸುರಕ್ಷತಾ ಕ್ರಮಗಳೇನು..?

ಅತಿಯಾದ ತಾಪಮಾನ ಇರುವ ಸಂದರ್ಭದಲ್ಲಿ ಹೆಚ್ಚು ನೀರನ್ನು ಕುಡಿಯಿರಿ, ಮಜ್ಜಿಗೆ, ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸುವುದು, ಗಾಳಿಯಾಡುವ ಪಾದರೆ ಧರಿಸುವುದು. ಹೊರಗಡೆ ತೆರಳುವ ವೇಳೆ ಛತ್ರಿ, ಟವಲ್​ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ನೇರ ಬಿಸಿಲು, ಬಿಸಿ ಗಾಳಿಗೆ ಒಡ್ಡಿಕೊಳ್ಳಬೇಡಿ, ಸಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೊಗಬಾರದು, ಕಪ್ಪು, ಗಾಢ ಬಣ್ಣದ ತೆಳು ಹಾಗೂ ಸಿಂಥೆಟಿಕ್​ ಉಡುಪುಗಳನ್ನು ಧರಿಸಬೇಡಿ. ಹೆಚ್ಚಿನ ಬಿಸಿಲು ಅವಧಿಯಲ್ಲಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಒಳ್ಳೆಯದಲ್ಲ.

* ಮಕ್ಕಳ ಕುರಿತು ಎಚ್ಚರ ಅಗತ್ಯ

ತಾಪಮಾನ ಹೆಚ್ಚಳದಿಂದ ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಬೇಗನೆ ಬಳಲುವ ಸಾಧ್ಯತೆ ಇರುವುದರಿಂದ ಆದಷ್ಟು ಬಿಸಿಲಿನ ಸಮಯದಲ್ಲಿ ಹೊರ ಹೋಗುವುದನ್ನು ತಪ್ಪಿಸುವುದು ಉತ್ತಮ. ತುರ್ತು ಸಂದರ್ಭದಲ್ಲಿ 108 ಸಹಾಯವಾಣಿ 102 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಆರೋಗ್ಯ ರಕ್ಷಣೆ ಪಡೆಯಬಹುದು.

ಕೋಟ್​...

ಅತಿ ಹೆಚ್ಚು ಬಿಸಿಲಿನಿಂದ ಸನ್​ ಸ್ಟೊ$ಕ್​ ಆಗುವ ಸಾಧ್ಯತೆಯಿರುತ್ತದೆ, ಆದ್ದರಿಂದ ಸಾರ್ವಜನಿಕರು ಆರೋಗ್ಯ ಇಲಾಖೆ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಬಿಸಿಗಾಳಿ, ಶಾಖದಿಂದ ಆರೋಗ್ಯ ರಕ್ಷಣೆಗೆ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರುವುದು, ಹೆಚ್ಚಿನ ಬಿಸಿಲಿನ ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು, ವಾಸವಿರುವ ಕೋಣೆಯನ್ನು ತಂಪಾಗಿರಿಸಿಕೊಳ್ಳಿ. ಬಿಸಿಗಾಳಿಗೆ ತುತ್ತಾದ ಕೂಡಲೇ ಚಿಕಿತ್ಸೆ ಒಳಪಡಿಸಬೇಕು.

- ಡಾ.ಬಿ.ಎಚ್​.ರವಿಕುಮಾರ್​, ಮಾನವನ ಆರೋಗ್ಯ ನೋಡಲ್​ ಅಧಿಕಾರಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net