ಬೆಲೆಗಳ ಏರಿಕೆ ಸರಣಿಯಿಂದ ಜನರು ತತ್ತರ: ಆರ್.ಅಶೋಕ್ ಆಕ್ಷೇಪ | Rate hike campaign

r ashoka
Published on

ಬೆಂಗಳೂರು: ರಾಜ್ಯ ಸರ್ಕಾರ ವಿವಿಧ ಬೆಲೆಗಳ ಏರಿಕೆ ಬರೆ ಎಳೆದಾಗಿದೆ. ಇಷ್ಟೂ ಸಾಲದೆಂಬಂತೆ ಮೆಟ್ರೋ ಪ್ರಯಾಣ ದರವನ್ನು ಶೇ.46ರಷ್ಟು ಹೆಚ್ಚಿಸಿ ಜನರು ಮತ್ತಷ್ಟು ತತ್ತರಿಸುವಂತೆ ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ತಮ್ಮ ಸಂದೇಶ ಹಂಚಿಕೊಂಡು, ಸಿಎಂ ಸಿದ್ದರಾಮಯ್ಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿ, ಮೆಟ್ರೋ ದರ ಏರಿಕೆಯಿಂದ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದೆ. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ ಎಂದು ತಿವಿದಿದ್ದಾರೆ.

ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ. ಈ ಕೂಡಲೇ ಮೆಟ್ರೋ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

ದರ ಏರಿಕೆ ಅಭಿಯಾನ

ರಾಜ್ಯ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದರ ಏರಿಕೆ ಅಭಿಯಾನ ಕೈಗೊಂಡಿದೆ ಎಂದು ಟೀಕಿಸಿದರು.

ಮಾರ್ಗಸೂಚಿ, ನೋಂದಣಿ ಶುಲ್ಕ, ಹಾಲು, ವಿದ್ಯುತ್, ಪೆಟ್ರೋಲ್, ಡೀಸೆಲ್ ದರ ಏರಿಸಿದ ಬಳಿಕ ಬಸ್ ಪ್ರಯಾಣ ದರ ಹೆಚ್ಚಿಸಿತು. ಇದೀಗ ಮೆಟ್ರೋ ಪ್ರಯಾಣ ದರವನ್ನು ಶೇ.46ರಷ್ಟು ಏರಿಸಿದೆ.

ಗ್ಯಾರಂಟಿಗಳ ಮೂಲಕ ಜನರಿಗೆ ಒಂದು ಕೈಯಿಂದ ಕೊಟ್ಟು, ಬೆಲೆಗಳ ಹೆಚ್ಚಳ ಮೂಲಕ ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ. ಆದರೆ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಬಿಟ್ಟಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net