

ನವದೆಹಲಿ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನ್ಯಾಯಾಕ್ಕಾಗಿ ಆಗ್ರಹಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುತ್ತಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲೂ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಕೆಲವು ಸಾರ್ವಜನಿಕರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಬೆನ್ನತ್ತಿದ್ದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ದೆಹಲಿಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ದಾರಿಯಲ್ಲಿ ಕೆಲವು ಪ್ರತಿಭಟನಾ ನಿರತರು ಕಾಂಗ್ರೆಸ್ ನಾಯಕನ ವಾಹನವನ್ನು ಬೆನ್ನತ್ತಿ ಅತುಲ್ ಸುಭಾಷ್ (Atul Subhash) ಸಾವಿಗೆ ಸಂಬಂಧಿಸಿದಂತೆ ಸಂಸತ್ನಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಅತುಲ್ ಅವರ ಫೋಟೋವನ್ನು ಸಹ ಜನರು ಪ್ರದರ್ಶಿಸಿದ್ದಾರೆ. ಚಾಕಲೇಟ್ ಎಸೆಯುವ ಮೂಲಕ ಸಾರ್ವಜನಿಕರ ಬೇಡಿಕೆಗೆ ಚಾಕಲೇಟ್ ಎಸೆಯುವ ಮೂಲಕ ರಾಹುಲ್ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುವ ವಿಶ್ವಾಸ ವ್ಯಕ್ತವಾಗಿದೆ.
ವಕೀಲೆ ದೀಪಿಕಾ ನಾರಾಯಣ್ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಆತುಲ್ ಸುಭಾಷ್ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಪುರುಷರ ಆತ್ಮಹತ್ಯೆಗಳ ಬಗ್ಗೆ ಯಾವುದೇ ಸಂಸದರು ಧ್ವನಿ ಎತ್ತುತ್ತಿಲ್ಲ. ನಾವು ದೆಹಲಿಯಲ್ಲಿ ಸಂತಾಪ ಸೂಚಕ ಸಭೆಗೆ ಹೋಗುತ್ತಿದ್ದಾಗ, ರಾಹುಲ್ ಗಾಂಧಿ (Rahul Gandhi) ಅವರನ್ನು ಕಂಡು ಅವರಿಗೆ ಈ ವಿಚಾರವನ್ನು ಮುಟ್ಟಿಸಿದ್ದೇವೆ ಎಂದು ವಿಡಿಯೋ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.