

ಅಯೋಧ್ಯೆ: ಶ್ರೀರಾಮ ಮಂದಿರ ನಿರ್ವಣಕ್ಕೆ ಅಪಾರ ಪ್ರಮಾಣದಲ್ಲಿ ದಾನ ಬರುತ್ತಿದ್ದು, ಚಿನ್ನ, ಬೆಳ್ಳಿಯ ಮತ್ತು ಅಮೂಲ್ಯ ವಸ್ತುಗಳು ಕ್ವಿಂಟಾಲ್ಗಟ್ಟಲೆ ಬಂದಿದೆ. ಆದರೆ, ಇಂಥ ವಸ್ತುಗಳನ್ನು ದಾನವನ್ನು ಮಾಡಬೇಡಿ ಬದಲಿಗೆ ಧನ ಸಹಾಯ ಮಾಡಿಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ. ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ದಿನದಿಂದಲೂ ಅಪಾರ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ, ತಾಮ್ರ ಸೇರಿದಂತೆ ಹಲವು ಲೋಹಗಳ ಇಟ್ಟಿಗೆ ಇನ್ನಿತರ ವಸ್ತುಗಳು ಅಯೋಧ್ಯೆಗೆ ಬಂದಿವೆೆ. ಚಿನ್ನಾಭರಣಗಳ ರಾಶಿಯೇ ಬಂದಿದೆ. ಈ ಸಂಪತ್ತನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕಷ್ಟವಾಗಿದೆ. ಅದಕ್ಕೆಂದೇ ವಿಶೇಷವಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಹಾಗಾಗಿ ದಯಮಾಡಿ ಭಕ್ತರು ಚಿನ್ನಾಭರಣವನ್ನು ಕಳಿಸುವುದನ್ನು ನಿಲ್ಲಿಸಿ ಎಂದು ಟ್ರಸ್ಟ್ ಕೇಳಿಕೊಂಡಿದೆ.
ಬಳಸುವುದು ಹೇಗೆ?: ದೇಗುಲಕ್ಕೆ ಲಕ್ಷಾಂತರ ಮೌಲ್ಯದ ಚಿನ್ನ-ಬೆಳ್ಳಿ ಇಟ್ಟಿಗೆಗಳು, ಗಟ್ಟಿ ಚಿನ್ನ, ಆಭರಣ ಮತ್ತು ಸಾಮಗ್ರಿಗಳು ಬಂದಿವೆ. ಆದರೆ ಇವನ್ನೆಲ್ಲ ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎನ್ನುವುದೇ ಟ್ರಸ್ಗೆ ಸವಾಲಾಗಿದೆ. ಆಗಸ್ಟ್ 5ರಂದು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಐದು ಬೆಳ್ಳಿ ಇಟ್ಟಿಗೆಗಳನ್ನು ಇಡಲಿದ್ದಾರೆ. ಅಂದು 40 ಕೆ.ಜಿ ತೂಕದ ಬೆಳ್ಳಿ ಇಟ್ಟಿಗೆಗಳನ್ನು ಇರಿಸಲಾಗುವುದು ಎನ್ನಲಾಗಿದೆ.
ಮಸೀದಿ ನಿರ್ಮಾಣಕ್ಕೆ ಟ್ರಸ್ಟ್ ರಚನೆ: ಅಯೋಧ್ಯೆಯಲ್ಲಿ ಬೃಹತ್ ಮಸೀದಿ ನಿರ್ಮಾಣ ಸಂಬಂಧ ಟ್ರಸ್ಟ್ ರಚಿಸಲಾಗುವುದು ಎಂದು ಸುನ್ನಿ ವಕ್ಪ್ ಮಂಡಳಿ ಟ್ರಸ್ಟ್ವೊಂದನ್ನು ರಚನೆ ಮಾಡಿದೆ. ಈ ಟ್ರಸ್ಟ್ಗೆ ‘ಇಂಡೋ-ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್’ ಎಂದು ಹೆಸರಿಸಲಾಗಿದ್ದು, ವಕ್ಪ್ ಮಂಡಳಿಯ ಅಧ್ಯಕ್ಷ ಜುಫರ್ ಅಹ್ಮದ್ ಅವರೇ ಇದರ ಅಧ್ಯಕ್ಷರಾಗಿದ್ದಾರೆ. ಫೌಂಡೇಷನ್ನಲ್ಲಿ 15 ಸದಸ್ಯರಿದ್ದು, ಸದ್ಯ 9 ಮಂದಿಯನ್ನು ಹೆಸರಿಸಲಾಗಿದೆ. ಉಳಿದ ಆರು ಮಂದಿಯನ್ನು ನಂತರ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಸೀದಿಯ ಜತೆಗೆ ಗ್ರಂಥಾಲಯ, ಆಸ್ಪತ್ರೆಯೂ ಐದು ಎಕರೆ ಜಾಗದಲ್ಲಿ ನಿರ್ವಣವಾಗಲಿದೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಸುನ್ನಿ ವಕ್ಪ್ ಮಂಡಳಿಗೆ ಅಯೋಧ್ಯೆ ಸಮೀಪದ ಧನ್ನಿಪುರ್ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಿದೆ.
ಮೊದಲು ಹನುಮನ ದರ್ಶನ ಪಡೆಯಲಿರುವ ಪ್ರಧಾನಿ: ಆಗಸ್ಟ್ 5ರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ, ಮೊದಲು ಹನುಮನಗರಿಯಲ್ಲಿನ ಹನುಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಬರುವ ಅವರು, ಶಿಲಾನ್ಯಾಸ ನೆರವೇರಿಸಿ ಮಾತನಾಡಲಿದ್ದಾರೆ. ಸಾಧು ಸಂತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅದಾದ ನಂತರ ಅಯೋಧ್ಯೆ ಅಭಿವೃದ್ಧಿ ಕಾರ್ಯದ ಭಾಗವಾಗಿ ಕೆಲ ಕಟ್ಟಡಗಳ ಗುದ್ದಲಿ ಪೂಜೆಯನ್ನೂ ನಡೆಸಲಿದ್ದಾರೆ ಎನ್ನಲಾಗಿದೆ.