

ಹಾಸನ: ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ಪಕ್ಷ ಅಧಿಕಾರಕ್ಕೆ ಬರಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ, ನಾನು ಡಿಸಿಎಂ ಆಗಬೇಕು ಎಂಬುದು ಜನರ ಬೇಡಿಕೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಚನ್ನರಾಯಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಪಾರ್ಟಿಯಲ್ಲಿ ಏನೇ ತೀರ್ಮಾನ ಕೈಗೊಂಡರೂ ನಾವು ಬದ್ಧ, ಮುಂದಿನ ೨-೩ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದರು. ಇದು ಬಹು ದಿನಗಳ ಬೇಡಿಕೆ, ಡಿಸಿಎಂ ನಿರೀಕ್ಷೆಯಲ್ಲೇ ನಾನು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಿಎಂ ಹಾಗೂ ಅಮಿತ್ ಷಾ ಅವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿ ವೈಯಕ್ತಿಕ ನಿರ್ಧಾರ ವಿಚಾರ ಮುಖ್ಯ ಅಲ್ಲ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಹಳಬರು, ಹೊಸಬರು ಬದ್ಧವಾಗಿರುತ್ತೇವೆ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಈಗಾಗಲೇ ಮಾತಾಡಿದ್ದಾರೆ. ಸಚಿವ ಸ್ಥಾನ ತ್ಯಾಗ ಹೇಳಿಕೆ ಬಗ್ಗೆ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರು ಹಿರಿಯ ನಾಯಕರು, ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರೊಂದಿಗೆ ಮಾತನಾಡುವೆ ಎಂದರು.
ಯಾವುದೇ ವಿಚಾರ ಬಂದಾಗ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಎಚ್. ವಿಶ್ವನಾಥ್ ಗೆ ಮಂತ್ರಿ ಸ್ಥಾನ ಕೊಡುವುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಷಯ ಎಂದರು. ಸಚಿವ ಸಂಪುಟ ವಿಸ್ತರಣೆ ಯಾದರೆ ಸ್ಫೋಟ ಆಗಲ್ಲ, ಸಿದ್ದರಾಮಯ್ಯ ಅವರಿಗೆ ಈಗ ಅಧಿಕಾರ ಇಲ್ಲ, ಈ ವೇಳೆ ಇಂಥ ಮಾತು ಸಹಜ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಅದಕ್ಕಾಗಿ ಲೋಕಸೇವಾ ಆಯೋಗದ ಬದಲು ನೇರ ನೇಮಕಕ್ಕೆ ಅವಕಾಶ ನೀಡಲಾಗಿದೆ. ಮುಂದಿನ ಮೂರು ತಿಂಗಳ ಒಳಗೆ ಎಲ್ಲ ಖಾಲಿ ಹುದ್ದೆಗಳಿಗೆ ವೈದ್ಯರ ನೇಮಕ ಆಗಲಿದೆ ಎಂದರು.