

ನವದೆಹಲಿ: ಸಣ್ಣದಾಗಿ ಕರೊನಾ ಸೋಂಕಿಗೆ ಒಳಗಾದ ವ್ಯಕ್ತಿಗಳ ದೇಹದಲ್ಲಿಯೇ ವೈರಸ್ಅನ್ನು ಎದುರಿಸುವ ಶಕ್ತಿ ಉತ್ಪತ್ತಿಯಾಗಲಿದೆ. ಅಂಥವರಿಗೆ ಮತ್ತೊಮ್ಮೆ ಕೋವಿಡ್19 ಕಾಣಿಸಿಕೊಳ್ಳುವುದಿಲ್ಲ...!
ಫ್ರಾನ್ಸ್ನಲ್ಲಿ ಕರೊನಾ ವಿರುದ್ಧ ಮುಂಚೂಣಿ ಪಡೆಯಲ್ಲಿದ್ದು ಹೋರಾಡುತ್ತಿರುವ ವೈದ್ಯರು, ದಾದಿಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಸಿದ ಪ್ರಯೋಗದಲ್ಲಿ ಇದು ಕಂಡುಬಂದಿದೆ.
ಲಘುವಾಗಿ ಕರೊನಾ ಸೋಂಕಿಗೆ ಒಳಗಾದ ವೈದ್ಯರು ಸೇರಿ ಆಸ್ಪತ್ರೆ ಸಿಬ್ಬಂದಿಯ ದೇಹದಲ್ಲಿ ವೈರಸ್ ನಿಗ್ರಹಿಸುವ ಪ್ರತಿಕಾಯಗಳು ಉತ್ಪತ್ತಿಯಾಗಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಈಶಾನ್ಯ ಫ್ರಾನ್ಸ್ನ ಸ್ಟ್ರಾಸ್ಬರ್ಗ್ನಲ್ಲಿರುವ ಪಾಶ್ಚರ್ ಸಂಸ್ಥೆ ಹಾಗೂ ವಿಶ್ವವಿದ್ಯಾಲಯ ಆಸ್ಪತ್ರೆ ಜಂಟಿಯಾಗಿ ನಡೆಸಿದ ಪ್ರಯೋಗದಲ್ಲಿ ಈ ಫಲಿತಾಂಶ ಗೋಚರವಾಗಿದೆ.
ಪರೀಕ್ಷೆಗೊಳಗಾದ ಎಲ್ಲ 160 ಜನರಲ್ಲೂ ರೋಗ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಅದರಲ್ಲೂ ಒಬ್ಬರಿಗೆ ಸೋಂಕು ಕಾಣಿಸಿಕೊಂಡ ಕೇವಲ 15 ದಿನಗಳಲ್ಲಿ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿವೆ. medrxiv ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಕರೊನಾ ವೈರಸ್ನ ಲಘು ಸೋಂಕಿಗೆ ಒಳಗಾದ ಉತ್ತರ ಫ್ರಾನ್ಸ್ ಆಸ್ಪತ್ರೆ ಸಿಬ್ಬಂದಿಯ ರಕ್ತ ಮಾದರಿಯ ಪರೀಕ್ಷೆಯ ಫಲಿತಾಂಶಗಳು ಎಂದು ಸಂಶೋಧನಾ ವರದಿಗೆ ಶೀರ್ಷಿಕೆ ನೀಡಲಾಗಿದೆ. ಕರೊನಾ ಸೋಂಕಿಗೆ ಒಳಗಾದ ಪರೀಕ್ಷಾರ್ಥಿಗಳ ಪೈಕಿ ಶೇ.98 ಜನರಲ್ಲಿ 28- 41 ದಿನಗಳ ಒಳಗಾಗಿ ರೋಗ ನಿರೋಧಕ ಶಕ್ತಿಯ ಕಣಗಳು ಕಂಡುಬಂದಿವೆ. ರಕ್ತದ ಮಾದರಿಯನ್ನು ಆಧರಿಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಕಾಲ ಕಳೆದಂತೆ ದೇಹದಲ್ಲಿ ವೈರಸ್ಅನ್ನು ನಿಗ್ರಹಿಸುವ ಕಣಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಈ ಸಂಶೋಧನೆಯಿಂದಾಗಿ ಕರೊನಾ ವೈರಸ್ಅನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯುವುದು ಸಾಧ್ಯವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಪ್ರಯೋಗಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.