

ರಾಜಸ್ಥಾನ: ನೆಚ್ಚಿನ ಸೆಲೆಬ್ರಿಟಿಗಳ ದೇವಸ್ಥಾನವನ್ನು ನಿರ್ಮಿಸಿ, ಅವರ ಮೂರ್ತಿಗಳಿಗೆ ಪ್ರತಿನಿತ್ಯ ಅಭಿಮಾನಿಗಳು ಪೂಜೆ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಈಗಾಗಲೇ ಸೂಪರ್ ಸ್ಟಾರ್ ರಜಿನಿಕಾಂತ್, ಪ್ರಧಾನಿ ನರೇಂದ್ರ ಮೋದಿ, ಖುಷ್ಬೂ ಹಾಗೂ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಾಣ ಮಾಡಿ ದೇವರೆಂದು ಪೂಜಿಸುವುದನ್ನು ನೋಡಿದ್ದೇವೆ. ಆದರೆ, ಬುಲೆಟ್ ಗಾಡಿಗೆ ಎಂದಾದರೂ ದೇವಸ್ಥಾನ ನಿರ್ಮಿಸಿರುವ ಬಗ್ಗೆ ಕೇಳಿದ್ದೀರಾ? ಅಚ್ಚರಿ ಎನಿಸಿದರೂ ಇದು ಸತ್ಯ.
ರಾಜಸ್ಥಾನದ ಗ್ರಾಮವೊಂದರಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ಗೆ ದೇವಸ್ಥಾನವನ್ನು ನಿರ್ಮಿಸಿ, ನಿತ್ಯವು ಪೂಜೆ ಮಾಡಲಾಗುತ್ತಿದೆ. ಇದರ ಹಿಂದಿರುವ ಆಸಕ್ತಿಕರ ಕತೆಯನ್ನು ನಿಮಗೀಗ ನಾವು ತಿಳಿಸುತ್ತೇವೆ.
ಬುಲೆಟ್ ಬಂಡಿ ದೇವಸ್ಥಾನವು ಓಂ ಬನ್ನ ದೇವಾಲಯ ಎಂದೇ ರಾಜಸ್ಥಾನದಲ್ಲಿ ಪ್ರಖ್ಯಾತಿ ಪಡೆದಿದೆ. ಜೋಧ್ಪುರದಿಂದ ಗುಜರಾತಿನ ಅಹಮದಾಬಾದ್ ನಗರಕ್ಕೆ ಸಂಪರ್ಕ ಕಲ್ಪಿಸುವ ಎನ್ಎಚ್ 62 ಹೆದ್ದಾರಿಯಲ್ಲಿ ಬರುವ ಪಾಲಿ ನಗರದಿಂದ ಸುಮಾರು 53 ಕಿ.ಮೀ ದೂರದಲ್ಲಿರುವ ಛೋಟಿಲಾ ಗ್ರಾಮದಲ್ಲಿ ಈ ದೇವಸ್ಥಾನ ಕಂಡುಬರುತ್ತದೆ. ಈ ದೇವಾಲಯದಲ್ಲಿರುವ ದೇವರು ಯಾರೆಂದರೆ, RNJ7773 ನೋಂದಣಿಯ 350 ಸಿಸಿ ರಾಯಲ್ ಎನ್ಫೀಲ್ಡ್ ಬೈಕ್.
ಯಾರೇ ಹೊಸದಾಗಿ ಬೈಕ್ ಖರೀದಿ ಮಾಡಲಿ, ಈ ದೇವಸ್ಥಾನಕ್ಕೆ ಬಂದು ಮೊದಲ ಪೂಜೆ ಸಲ್ಲಿಸುತ್ತಾರೆ. ರಸ್ತೆ ಮೇಲೆ ತಮ್ಮ ಗಂಡಂದಿರುವ ಬೈಕ್ ಓಡಿಸುವಾಗ ಅವರ ಪ್ರಾಣಕ್ಕೆ ಏನು ಆಗದಿರಲಿ ಎಂದು ಭಕ್ತಿಯಿಂದ ಕೇಳಿಕೊಳ್ಳಲು ಸಾಕಷ್ಟು ಮಹಿಳೆಯರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನ ಆವರಣದಲ್ಲಿರುವ ಮರಕ್ಕೆ ಕೆಂಪು ದಾರವನ್ನು ಕಟ್ಟಿ, ಪೂಜೆ ಸಲ್ಲಿಸುತ್ತಾರೆ. ಅಷ್ಟಕ್ಕೂ ಈ ಬುಲೆಟ್‌ಗಾಗಿ ದೇವಾಲಯವನ್ನು ಏಕೆ ನಿರ್ಮಿಸಲಾಯಿತು? ಇದೇನು ಪೂಜೆ? ಹಾಗಾದರೆ ಇದರ ಹಿಂದಿರುವ ಕುತೂಹಲಕಾರಿ ಕತೆ ಏನು ಎಂದು ತಿಳಿದುಕೊಳ್ಳೋಣ.
1988ರಲ್ಲಿ ರಸ್ತೆ ಅಪಘಾತದಲ್ಲಿ ಓಂ ಸಿಂಗ್ ರಾಥೋಡ್ ಎಂಬ ವ್ಯಕ್ತಿ ತೀರಿಕೊಂಡರು. ಅಪಘಾತ ನಡೆದ ಸ್ಥಳದಲ್ಲೇ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅಂದು ಅಪಘಾತದ ಸಮಯದಲ್ಲಿ ಪೊಲೀಸರು ಬೈಕ್ ಅನ್ನು ವಶಕ್ಕೆ ಪಡೆದು ಠಾಣೆಗೆ ತೆಗದುಕೊಂಡು ಹೋದರು. ಆದರೆ, ನಂತರದಲ್ಲಿ ನಡೆದ ನಿಗೂಢ ಘಟನೆ ಎಲ್ಲರನ್ನೂ ಅಚ್ಚರಿಗೆ ದೂಡಿತು. ಆ ನಿಗೂಢ ಏನೆಂದರೆ, ಠಾಣೆಗೆ ತೆಗೆದುಕೊಂಡು ಹೋದ ಮಾರನೇ ದಿನವೇ ಬೈಕ್ ಠಾಣೆಯಿಂದ ನಿಗೂಢವಾಗಿ ಕಣ್ಮರೆಯಾಗಿ, ಮತ್ತೆ ಅಪಘಾತದ ಸ್ಥಳದಲ್ಲಿ ಬೈಕ್ ಪತ್ತೆಯಾಯಿತು. ಪೊಲೀಸರು ಅಲ್ಲಿಂದ ಬೈಕ್ ಅನ್ನು ಮತ್ತೆ ಠಾಣೆಗೆ ತೆಗೆದುಕೊಂಡು ಹೋದರು ಬೈಕ್ ಮತ್ತೆ ಅದೇ ಸ್ಥಳದಲ್ಲಿ ಇರುತ್ತಿತ್ತು. ಈ ವಿಚಾರ ಗೊತ್ತಾದ ಬಳಿಕ ಅಲ್ಲಿನ ಗ್ರಾಮಸ್ಥರು ಬೈಕ್ಗೆ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಇದು ರಾಯಲ್ ಎನ್ಫ್ರೀಲ್ಡ್ ದೇವಸ್ಥಾನ ನಿರ್ಮಾಣದ ಹಿಂದಿನ ಕತೆ. ಅಂದಿನಿಂದ ಆ ಸ್ಥಳದಲ್ಲಿ ಅಪಘಾತಗಳನ್ನು ಸಂಪೂರ್ಣವಾಗಿ ನಿಂತು ಹೋಗಿವೆ ಎಂದು ಹೇಳಲಾಗಿದೆ. ಅಂದು ಅಪಘಾತದಿಂದ ಮರಣ ಹೊಂದಿದ ಓಂ ಸಿಂಗ್, ಆತ್ಮವಾಗಿ ಅಪಘಾತಗಳನ್ನು ತಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಹೀಗಾಗಿ ಅಂದಿನಿಂದ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.
ಛೋಟಿಲಾ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿ ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ಕೆಲವರು ಹೆಲ್ಮೆಟ್ ಕೂಡ ದೇಣಿಗೆ ನೀಡುತ್ತಾರೆ. ಇದೀಗ ಈ ದೇವಸ್ಥಾನಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರ ಹಿಂದಿನ ಕತೆ ಕೇಳಿ ಹುಬ್ಬೇರಿಸುತ್ತಿದ್ದಾರೆ. (ಏಜೆನ್ಸೀಸ್)