ರಾಜ್ಯದ ರಾಜಕೀಯ ಬೆಳವಣಿಗೆ ಕಂಡು ಜನ ಅಸಹ್ಯ ಪಡುತ್ತಿದ್ದಾರೆ, ಜನ ಕಲ್ಲು ಹೊಡೆಯುವ ಮುನ್ನ ಎಚ್ಚೆತ್ತುಕೊಳ್ಳಿ: ಡಿಕೆ ಸುರೇಶ್

dks
Published on

ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಹಿತಕ್ಕೆ ಪೂರಕವಾಗಿಲ್ಲ. ಜನರಿಗೆ ಅಸಹ್ಯವಾಗುತ್ತಿದ್ದು, ಅವರು ಬೀದಿಯಲ್ಲಿ ಕಲ್ಲು ಹೊಡೆಯುವ ಮುನ್ನ ಎಲ್ಲಾ ಪಕ್ಷಗಳ ನಾಯಕರು ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಸಲಹೆ ನೀಡಿದರು.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಭಿವೃದ್ಧಿ ಮಾಡಲಿ ಎಂದು ಜನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ದೇಶದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಅಧಿಕಾರ ನೀಡಿದ್ದಾರೆ. ಆದರೆ ಜನರಿಂದ ಆಯ್ಕೆಯಾದ ನಾಯಕರು ಆರೋಪ, ಪ್ರತ್ಯಾರೋಪ, ದೂಷಣೆ ಮಾಡುತ್ತಾ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ. ಅದನ್ನು ಮರೆತು ಈ ರೀತಿ ಕಿತ್ತಾಡುತ್ತಿರುವುದು ಸರಿಯೇ? ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದೆ. ಈ ಹೊತ್ತಿನಲ್ಲಿ ಜನ ಅಭಿವೃದ್ಧಿ, ಯುವಕರು, ರೈತರ ಸಮಸ್ಯೆ ಬಗೆಹರಿಸುವ ಕಾರ್ಯಗಳನ್ನು ಎದುರು ನೋಡುತ್ತಿದ್ದಾರೆ. ಈ ಆರೋಪಗಳು ರಾಜ್ಯದ ಜನರಿಗೆ ಎಳ್ಳಷ್ಟೂ ಇಷ್ಟವಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಜನ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಪರಿಸ್ಥಿತಿ ಹೀಗೆ ಮುಂದಿವರಿದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷವಾಗಿರಲಿ ಈ ಪರಿಸ್ಥಿತಿ ಬರಬಹುದು ಎಂದು ಎಲ್ಲಾ ಪಕ್ಷದ ನಾಯಕರಿಗೆ ಎಚ್ಚರಿಸಲು ಬಯಸುತ್ತೇನೆ. ಆರೋಪ ಪ್ರತ್ಯಾರೋಪಗಳನ್ನು ತೀರ್ಮಾನ ಮಾಡಲು ನ್ಯಾಯಾಲಯ ಇದೆ" ಎಂದು ತಿಳಿಸಿದರು.

ಮೈಸೂರಿನಲ್ಲಿ ಜಿ.ಟಿ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, "ನಾಡಿಗೆ ಒಳ್ಳೆಯದಾಗಲಿ ಎಂದು ಸಿಎಂ ಹಾಗೂ ಡಿಸಿಎಂ ನಾಡ ದೇವಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ. ಚುನಾವಣೆಗೆ ಇನ್ನೂ ಸಮಯವಿದೆ. ರಾಜಕೀಯ ಕೆಸರೆರಚಾಟ ನಿಲ್ಲಲಿ" ಎಂದು ತಿಳಿಸಿದರು.

ಸರಿ ತಪ್ಪುಗಳ ಬಗ್ಗೆ ತನಿಖಾಧಿಕಾರಿಗಳು ತನಿಖೆ ಮಾಡುತ್ತಾರೆ

ಎಸ್.ಟಿ ಸೋಮಶೇಖರ್ ಹಾಗೂ ಜಿಟಿ ದೇವೇಗೌಡ ಅವರು ಒಟ್ಟಾಗಿ ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿರುವ ಬಗ್ಗೆ ಕೇಳಿದಾಗ, "ಅವರು ದೂರು ಕೊಟ್ಟು ತಮ್ಮ ಕೆಲಸ ಮಾಡಿದ್ದಾರೆ. ನ್ಯಾಯಾಲಯ ಅವರ ಮನವಿ ಪುರಸ್ಕರಿಸಿ ತನಿಖೆಗೆ ಆದೇಶ ನೀಡಿದೆ. ತನಿಖೆ ಮುಗಿಯುವವರೆಗೂ ಎಲ್ಲರೂ ತಾಳ್ಮೆಯಿಂದ ಇರಬೇಕು. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ" ಎಂದು ತಿಳಿಸಿದರು.

ಜಿಟಿಡಿ ವಾಸ್ತವಾಂಶದ ಬಗ್ಗೆ ಮಾತನಾಡಿದ್ದಾರೆ.

ಜಿ.ಟಿ ದೇವೇಗೌಡ ಅವರ ಹೇಳಿಕೆ ಕಾಂಗ್ರೆಸ್ ಗೆ ಆತ್ಮಸ್ಥೈರ್ಯ ತುಂಬಿದೆಯೇ ಎಂದು ಕೇಳಿದಾಗ, "ಇದು ಅವರ ಪಕ್ಷದ ಆಂತರಿಕ ವಿಚಾರ. ಅವರ ಪಕ್ಷದ ನಾಯಕರಿಗೆ ತಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಅವರ ಪಕ್ಷದ ನಾಯಕರು ಮಾಡಿದ್ದನ್ನೆಲ್ಲ ಒಪ್ಪಬೇಕು ಎಂದೇನಿಲ್ಲ. ಅವರು ವಾಸ್ತವತೆ ಯನ್ನು ಹೇಳಿದ್ದಾರೆ. ಇಲ್ಲಿ ಎಲ್ಲ ಪಕ್ಷದವರೂ ಫಲಾನುಭವಿಗಳಿದ್ದು, ಆರೋಪಿಗಳಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ತೀರ್ಮಾನದಂತೆ ಆಗಿದೆ. ಹೀಗಾಗಿ ಇದನ್ನು ಏಕೆ ದೊಡ್ಡದಾಗಿ ಮಾಡಿತ್ತಿದ್ದೀರಿ ಎಂದು ಹೇಳಿದ್ದಾರೆ" ಎಂದರು.

ಈ ಪ್ರಕರಣ ತಲೆ ತಗ್ಗಿಸುವಂತಹದ್ದು

ಮುನಿರತ್ನ ಅವರ ಪ್ರಕರಣ ತನಿಖೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಸುರೇಶ್​, "ಈ ವಿಚಾರವಾಗಿ ಮಾಹಿತಿ ಇಲ್ಲ. ಇದು ಅಸಹ್ಯವಾದ ವಾತಾವರಣ. ರಾಜ್ಯದ ಬೆಳವಣಿಗೆಗೆ ಒಳ್ಳೆಯದಲ್ಲ. ಕರ್ನಾಟಕ ಉತ್ತಮ ಆಡಳಿತ, ಬೆಳವಣಿಗೆ ಹಾಗೂ ಪ್ರಗತಿ ಸಾಧಿಸುತ್ತದೆ ಎಂದು ಎಲ್ಲಾ ಕಡೆ ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆ ತಲೆತಗ್ಗಿಸುವಂತಿದೆ" ಎಂದು ತಿಳಿಸಿದರು.

muniratna DK Brothers

ಎಲ್ಲಾ ಪಕ್ಷಗಳು ಇದಕ್ಕೆ ಕಾರಣ. ಇದು ಒಂದು ಪಕ್ಷದ ಕೊಡುಗೆ ಅಲ್ಲ. ಸುದ್ದಿಯಲ್ಲಿರಬೇಕು ಎಂದು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ಇದರ ಜತೆಗೆ ಮಾಧ್ಯಮಗಳ ಪಾತ್ರವೂ ಇದೆ. ಮಾಧ್ಯಮಗಳು ಸಮಾಜ ತಿದ್ದುವ ಜವಾಬ್ದಾರಿ ಹೊಂದಿವೆ. ಜನ ನಾಯಕರ ಮೇಲೆ ಬೇಸತ್ತಿದ್ದಾರೆ" ಎಂದು ತಿಳಿಸಿದರು.  ನಾನು ವಿಶ್ರಾಂತಿಯಲ್ಲಿ ಇದ್ದೇನೆ: ಚನ್ನಪಟ್ಟಣಕ್ಕೆ ನಿಖಿಲ್ ಅಭ್ಯರ್ಥಿಯಾಗಲಿದ್ದು, 50 ಕೋಟಿ ಕೇಳಿರುವ ಆರೋಪದ ಬಗ್ಗೆ ಕೇಳಿದಾಗ, "ನನಗೆ ಈ ವಿಚಾರ ಗೊತ್ತಿಲ್ಲ. ನಾನಿಗ ವಿಶ್ರಾಂತಿಯಲ್ಲಿದ್ದೇನೆ" ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net