

Mohan Bhagwat: ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇ.50 ರಷ್ಟು ಸುಂಕದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ (ಸೆ12) ಪರೋಕ್ಷವಾಗಿ ಟೀಕಿಸಿದರು. ಟ್ರಂಪ್ ಹತಾಶೆಯಿಂದ ಈ ಕ್ರಮವು ಹುಟ್ಟಿಕೊಂಡಿದ್ದು, ಭಾರತದ ಬೆಳವಣಿಗೆಗೆ ಹೆದರುವವರು ಇಂತಹ ಕ್ರಮಗಳ ಮೊರೆ ಹೋಗುತ್ತಾರೆ ಎಂದರು.
ಶುಕ್ರವಾರ ನಾಗ್ಪುರದಲ್ಲಿನ ಬ್ರಹ್ಮ ಕುಮಾರೀಸ್ ವಿಶ್ವ ಶಾಂತಿ ಸರೋವರದ 7 ನೇ ಸಂಸ್ಥಾಪನಾ ದಿನದಂದು ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಭಾರತ ಬಲಶಾಲಿಯಾದರೆ ತಮಗೆ ಗತಿ ಏನು..?, ತಮ್ಮ ಸ್ಥಾನ ಏನಾಗುತ್ತದೆ ಎಂಬ ಆತಂಕ ಜನರಿಗಿದ್ದು, ಆದ್ದರಿಂದಲೇ ಭಾರತೀಯ ಸರಕುಗಳ ಮೇಲೆ ಸುಂಕ ವಿಧಿಸಲಾಗುತ್ತಿದೆ ಎಂದರು.
ಇಂದು ಜಗತ್ತು ಸಮಸ್ಯೆಗೆ ಪರಿಹಾರಗಳನ್ನು ಹುಡುಕುತ್ತಿದೆ, ಅದರ ಅಪೂರ್ಣ ದೃಷ್ಟಿಕೋನದಿಂದಾಗಿ ಬೆಳವಣಿಗೆ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ, ಭಾರತ ಮುಂದಿನ ದಿನಗಳಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಮತ್ತು ಜಗತ್ತನ್ನು ಪ್ರಗತಿಯತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತ ಶ್ರೇಷ್ಠ ದೇಶ ಮತ್ತು ಭಾರತೀಯರು ಸಹ ಶ್ರೇಷ್ಠರಾಗಲು ಶ್ರಮಿಸಬೇಕು. ಭಾರತ ದೊಡ್ಡದು, ಮತ್ತು ಅದು ದೊಡ್ಡದಾಗಿ ಬೆಳೆಯಲು ಬಯಸುತ್ತದೆ ಎಂದು ಅವರು ಹೇಳಿದರು.
ಸರ್ಕಾರವು ತನ್ನ ಕಾರ್ಯತಂತ್ರದೊಂದಿಗೆ ಎಚ್ಚರಿಕೆಯಿಂದ ಮುಂದುವರಿಯುತ್ತಿರುವುದರಿಂದ, ಅಮೆರಿಕದ ಮೇಲೆ ಇದೇ ರೀತಿಯ ಪ್ರತೀಕಾರದ ಸುಂಕಗಳನ್ನು ವಿಧಿಸುವಂತೆ ವಿಪಕ್ಷಗಳ ನಾಯಕರು ಸೇರಿದಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಭಾರತೀಯ ಸರಕುಗಳ ಮೇಲೆ ಮೊದಲು ಶೇಕಡಾ 25 ರಷ್ಟು ಮೂಲ ಸುಂಕವನ್ನು ವಿಧಿಸಿದರು ಮತ್ತು ನಂತರ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಶೇಕಡಾ 25 ರಷ್ಟು ಸುಂಕವನ್ನು ಘೋಷಿಸಿದರು, ಇದು ಉಕ್ರೇನ್‌ನಲ್ಲಿ ಮಾಸ್ಕೋದ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಭಾರತ ಈ ಸುಂಕಗಳನ್ನು ಅನ್ಯಾಯಯುತ, ಅಸಮಂಜಸ ಎಂದು ಕರೆದಿದ್ದು, ಇಂತಹ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.(ಏಜೆನ್ಸೀಸ್)