ಸಂಚಾರ ನಿಯಮ ಮುರಿದರೆ ದಂಡ ಖಚಿತ

ಸಂಚಾರ ನಿಯಮ ಮುರಿದರೆ ದಂಡ ಖಚಿತ
Published on

ಎಚ್.ಡಿ.ಕೋಟೆ: ಜುಲೈ 1ರಿಂದ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ತಮ್ಮ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸಿದೆ ಬೈಕ್ ಸವಾರಿ ಮಾಡುವುದು ಸೇರಿದಂತೆ ಎಲ್ಲ ರೀತಿಯ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇನ್ನು ಮುಂದೆ ದಂಡ ಬೀಳಲಿದೆ.

ಪೊಲೀಸ್ ಇಲಾಖೆ ವತಿಯಿಂದ ಪಟ್ಟಣ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ವೃತದಲ್ಲಿ ಸ್ವಯಂ ಚಾಲಿತ ಸಂಚಾರಿ ದಂಡ ವಿಧಿಸಲು ಅತ್ಯಾಧುನಿಕ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ವೇಗದ ಮಿತಿ ದಾಟುವ ವಾಹನ ಚಾಲಕರಿಗೆ ದಂಡದ ಬಿಸಿ ಮುಟ್ಟಿಸಲಿದ್ದಾರೆ.

ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಪ್ರಾಯೋಗಿಕವಾಗಿ ಮೂರು ಕ್ಯಾಮರಾಗಳನ್ನು ಅಳವಡಿಸಿದ್ದು, ಮುಂದಿನ ದಿನಗಳಲ್ಲಿ ಸರಗೂರು, ಅಂತರಸಂತೆ, ಮಾದಪುರ, ಹಂಪಾಪುರ ಸೇರಿದಂತೆ ಪಟ್ಟಣದ ಸಾರ್ವಜನಿಕರ ಹೆಚ್ಚು ಸಂಚರಿಸುವ ಸ್ಥಳಗಳಲ್ಲಿಯೂ ಕೂಡ ಕ್ಯಾಮರಾ ಅಳವಡಿಸಲು ಇಲಾಖೆ ಮುಂದಾಗಿದೆ.
ಈ ಕ್ಯಾಮರಾಗಳು ಒಂದು ಕಿ.ಮೀ ದೂರದಲ್ಲಿ ಬರುವ ವಾಹನಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದ್ದು, ಬೈಕ್ ಸವಾರರು ಹೆಲ್ಮೆಟ್ ಹಾಕದೆ ಇರುವುದು, ಒಂದು ಬೈಕ್‌ನಲ್ಲಿ ಮೂರು ಜನ ಸಂಚರಿಸುವುದು, ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಹಾಕದೆ ಇರುವುದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಯನ್ನು ಸೆರೆ ಹಿಡಿದು ವಾಹನಗಳ ಮಾಲೀಕರಿಗೆ ನೇರವಾಗಿ ಅವರ ಮನೆಯ ವಿಳಾಸಕ್ಕೆ ದಂಡದ ರಸೀದಿಯನ್ನು ಪೋಸ್ಟ್ ಮೂಲಕ ಅಥವಾ ಮೊಬೈಲ್ ನಂಬರ್‌ಗೆ ಮೆಸೇಜ್ ಕಳುಹಿಸಿ ದಂಡ ವಸೂಲಿ ಮಾಡುವ ಕೆಲಸ ಆಗಲಿದೆ.
ಈ ನಿಯಮವು ಜುಲೈ 1 ರಿಂದ ಚಾಲನೆಗೆ ಬರಲಿದ್ದು, ಈಗಾಗಲೇ ಎಚ್.ಡಿ.ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಟ್ಟಣದ ವಿವಿಧ ಶಾಲೆಗಳಲ್ಲಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಬಗ್ಗೆ ಬೀದಿ ನಾಟಕ, ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಹರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.

ಎಚ್ಚರ ಅಗತ್ಯ: ವಾಹನ ಚಾಲಕರು ಇನ್ನು ಮುಂದೆ ಬಹಳ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸಬೇಕಿದೆ. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು, ವಾಹನ ಚಾಲಕರು ಅಡ್ಡಾದಿಡ್ಡಿ ವಾಹನಗಳನ್ನ ನಿಲ್ಲಿಸಬಾರದು, ಅಡ್ಡದಿಡ್ಡಿ ಚಲಾಯಿಸಬಾರದು, ವಾಹನ ಚಾಲಕರು ವಾಹನಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಸಂಚಾರ ನಿಯಮ ಉಲ್ಲಂಘಿಸಿದವರನ್ನ ಕ್ಯಾಮರಾ ಪತ್ತೆ ಹಚ್ಚಿಚಲಿವೆ. ಜತೆಗೆ ವಾಹನ ಮಾಲೀಕರ ಮನೆಯ ವಿಳಾಸಕ್ಕೆ ದಂಡದ ರಸೀದಿ ಕಳುಹಿಸಲುವ ವ್ಯವಸ್ಥೆಯಾಗಲಿದೆ. ಒಂದು ವೇಳೆ ದಂಡ ಕಟ್ಟದಿರುವ ವಾಹನಗಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದು ದಂಡ ವಸೂಲಿ ಮಾಡಲಿದೆ ಎಂದು ಎಚ್.ಡಿ.ಕೋಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net