

ಬೆಂಗಳೂರು: ಪೆನ್‌ಡ್ರೈವ್ ಪ್ರಕರಣದಲ್ಲಿ ಬೇರೆಯವರ ರಾಜೀನಾಮೆ ಕೇಳುವ ಬದಲು ತಮ್ಮ ಮನೆ ಮಗ ತಪ್ಪು ಮಾಡಿದ್ದು, ಜೆಡಿಎಸ್‌ನವರು ನಾವು ರಾಜೀನಾಮೆ ಕೊಡುತ್ತೇವೆ ಎಂದು ಹೇಳಿದ್ದಾರೆಯೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೆಣಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯಂಕರ ಅಪರಾಧ ನಮ್ಮ ಮನೆ ಮಗ ಮಾಡಿದ್ದಾನೆ. ಇದು ತಪ್ಪು ಎಂದು ಜೆಡಿಎಸ್ ನಾಯಕರು ಹೇಳಿದ್ದಾರಾ? ಪ್ರತಿ ಬಾರಿಯೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಪರಮೇಶ್ವರ್ ರಾಜೀನಾಮೆ ಕೇಳುತ್ತಿದ್ದಾರೆ. ನಮ ಮನೆಯ ಮಗ ತಪ್ಪು ಮಾಡಿದ್ದಾನೆ ಎಂದು ಜೆಡಿಎಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ಕಾಂಗ್ರೆಸ್‌ನವರು ಏಕೆ ರಾಜೀನಾಮೆ ಕೊಡಬೇಕು?. ನಮ್ಮ ಮಗ ತಪ್ಪು ಮಾಡಿದ್ದಾನೆ. ನಾವು ರಾಜೀನಾಮೆ ಕೊಡುತ್ತೇವೆ ಅಂತ ಹೇಳಿದ್ದಾರಾ? ಎಂದು ತಿರುಗೇಟು ನೀಡಿದರು.
ಪ್ರಜ್ವಲ್ ರೇವಣ್ಣ ಕುಟುಂಬದಲ್ಲೇ ಎಂಎಲ್ಎ, ಎಂಪಿ ಇದ್ದಾರೆ. ಪ್ರಕರಣದ ನೈತಿಕತೆ ಹೊತ್ತು ಪ್ರಜ್ವಲ್ ರೇವಣ್ಣ ಅವರ ಕುಟುಂಬದ ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಪೆನ್‌ಡ್ರೈವ್ ಪ್ರಕರಣದ ಬಳಿಕವೂ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿದಿರುವುದನ್ನು ನೋಡಿದರೆ ಎರಡೂ ಪಕ್ಷಗಳು ಒಟ್ಟಾಗಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಪೆನ್‌ಡ್ರೈವ್ ಪ್ರಕರಣದಿಂದ ಬಹುಶಃ ಬಿಜೆಪಿಯವರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮುಂದುವರೆದಿದೆ. ಬಿಜೆಪಿ, ಜೆಡಿಎಸ್‌ಗೆ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಇದರರ್ಥ ಬಿಜೆಪಿಗೆ ಅಧಿಕಾರ ಮುಖ್ಯವೇ ಹೊರತು ಯಾರು ಎಷ್ಟೇ ದೊಡ್ಡ ಅಪರಾಧ ಮಾಡಿದರೂ ಅದು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದರು.
ಸಿಬಿಐ ತನಿಖೆ ಕೇಳುವುದು ಹವ್ಯಾಸವಾಗಿದೆ. ಯಾವ ಕಾರಣಕ್ಕಾಗಿ ಸಿಬಿಐ ತನಿಖೆ ಕೊಡಬೇಕು? ಈ ಹಿಂದೆ ಅಕ್ರಮ ಗಣಿಗಾರಿಕೆ, ಪರೇಷ್ ಮೇಸ್ತ ಹಾಗೂ ಡಿವೈಎಸ್ಪಿ ಗಣಪತಿ ಪ್ರಕರಣಗಳಲ್ಲಿ ಸಿಬಿಐ ಯಾವ ಸಾಧನೆ ಮಾಡಿದೆ? ನಮ್ಮ ಪೊಲೀಸರ ತನಿಖಾ ವರದಿಯನ್ನು ಅನುಮೋದಿಸಿದ್ದು ಬಿಟ್ಟರೆ ಬೇರೆ ಯಾವ ಪ್ರಗತಿಯೂ ಇಲ್ಲ. ಜೆಡಿಎಸ್-ಬಿಜೆಪಿಯವರ ಉದ್ದೇಶ ಅಮಿತ್ ಶಾ ಕೈಕಾಲಿಗೆ ಬಿದ್ದು ಪ್ರಕರಣವನ್ನು ಮುಚ್ಚಿಹಾಕಿಸುವುದೇ ಆಗಿದೆ. ಹಾಗಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಬಿಜೆಪಿಯವರು ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ತಟಸ್ಥರಾಗಿರುವುದೇಕೆ? ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲಿ ನಾಪತ್ತೆಯಾಗಿದ್ದಾರೆ? ಹಾಸನಕ್ಕೆ ಹೋಗಿ ಏಕೆ ಸಂತ್ರಸ್ತರಿಗೆ ಸಾಂತ್ವಾನ ಹೇಳುತ್ತಿಲ್ಲ. ಅಲ್ಲಿನ ಜನ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂಬ ಭಯವೇ? ಎಂದು ಪ್ರಶ್ನಿಸಿದರು.
ಕೊಡಗಿನಲ್ಲಿ ವಿದ್ಯಾರ್ಥಿನಿ ಕೊಲೆ, ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಬಿಜೆಪಿಯವರು ಉಸಿರು ಬಿಡುತ್ತಿಲ್ಲ. ಅದೇ ಹುಬ್ಬಳ್ಳಿ ಪ್ರಕರಣದಲ್ಲಿ ಅಮಿತ್ ಶಾ ಅವರಿಂದ ಹಿಡಿದು ಎಲ್ಲ ಬಿಜೆಪಿ ನಾಯಕರೂ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದರು. ಕೊಡಗು ಪ್ರಕರಣದಲ್ಲಿ ವೈಯಕ್ತಿಕ ಎಂದವರು, ನೇಹಾ ಪ್ರಕರಣದಲ್ಲಿ ವಿಶೇಷ ಆಸಕ್ತಿ ತೋರಿಸಿದರು. ಇದರರ್ಥ ಅವರ ರಾಜಕೀಯ ಲಾಭವೇ ಹೊರತು ಜನಪರ ಕಾಳಜಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ಬಂಧನಕ್ಕೆ ಕೇಂದ್ರ ಸರ್ಕಾರ ಯಾವುದೇ ಸಹಕಾರ ನೀಡುತ್ತಿಲ್ಲ. ಬ್ಲೂ ಕಾರ್ನರ್ ನೊಟೀಸ್ ಜಾರಿಯಾಗಿದ್ದು, ಕೇಂದ್ರ ಸರ್ಕಾರ ಇಂಟರ್‌ಪೋಲ್‌ಗೆ ಪತ್ರ ಬರೆದಿಲ್ಲ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.