

ಬೆಂಗಳೂರು: ಕಳೆದ ಎರಡೂವರೆ ವರ್ಷಗಳಿಂದ ಭಾರಿ ವಾಹನಗಳಿಗೆ ನಿಷೇಧವಿದ್ದ ಪೀಣ್ಯ ಮೇಲ್ಸೇತುವೆ ಸೋಮವಾರದಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆಯಾಗಿದ್ದು, ಇದರಿಂದ ವಾಹನ ಚಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸುಮಾರು ೨೫ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈಓವರ್ ಅನ್ನು ಸಂಚಾರಕ್ಕೆ ಮುಕ್ತಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೆಂಗಳೂರು ಸಂಚಾರ ಪೊಲೀಸರು ಹಸಿರು ನಿಶಾನೆ ತೋರಿಸಿದ್ದಾರೆ. ಆದ್ದರಿಂದ ಭಾರಿ ವಾಹನ ಚಾಲಕರು ಯಾವುದೇ ಕಿರಿಕಿರಿ ಇಲ್ಲದೇ ಮೇಲ್ಸೇತುವೆ ಸಂಚರಿಸುತ್ತಿದ್ದಾರೆ.
ವಾರದಲ್ಲಿ ೬ ದಿನ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ವಿಶೇಷ ದುರಸ್ತಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ ೬ ಗಂಟೆಯಿಂದ ಶನಿವಾರ ಬೆಳಗ್ಗೆ ೬ ಗಂಟೆವರೆಗೂ ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಭಾರಿ ವಾಹನಗಳು ಮಾತ್ರ ಮೇಲ್ಸೇತುವೆ ಎಡಪಥದಲ್ಲಿ ಗರಿಷ್ಠ ೪೦ ಕಿ.ಮೀ ವೇಗ ಮಿತಿಯಲ್ಲಿ ಸಂಚರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.
ಕಳೆದ ಎರಡೂವರೆ ವರ್ಷಗಳಿಂದ ಭಾರಿ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿತ್ತು. ಕೊನೆಗೂ ಈಗ ಭಾರಿ ವಾಹನಗಳ ಓಡಾಟಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಬಸ್, ಲಾರಿ, ಟ್ರಕ್‌ಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಗರದ ತುಮಕೂರು ರಸ್ತೆಯಲ್ಲಿರುವ ೧೫ ಮೀಟರ್ ಅಗಲದ, ೪.೨ ಕಿಮೀ ಉದ್ದದ ಮೇಲ್ಸೇತುವೆಯಲ್ಲಿ ಸಮಸ್ಯೆ ಎದುರಾದ ಹಿನ್ನೆಲ್ಲೆ ಬಸ್‌ಗಳು ಮತ್ತು ಟ್ರಕ್‌ಗಳಂತಹ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿತ್ತು. ಇದರಿಂದ ತುಮಕೂರು ರಸ್ತೆಯಲ್ಲಿ ಅಧಿಕವಾಗಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಮೇಲ್ಸೇತುವೆಯ ಪ್ರಿಸ್ಟ್ರೆಸ್ಡ್ ಕೇಬಲ್‌ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸದಾಗಿ ಕೇಬಲ್‌ಗಳ ಅಳವಡಿಕೆ ಕಾರ್ಯ ನಡೆದಿದೆ. ಇದೀಗ ಪೀಣ್ಯ ಮೇಲ್ಸೇತುವೆ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಸಂಚಾರದಟ್ಟಣೆಗೆ ಮುಕ್ತಿ:
ಇನ್ನು ಪೀಣ್ಯ ಫ್ಲೈಓವರ್ ಮೇಲೆ ನಿರ್ಬಂಧವಿದ್ದರಿಂದ ಎರಡೂವರೆ ವರ್ಷಗಳಿಂದ ಕೆಳಗಿನ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ದಿನ ನಿತ್ಯದ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದರು. ಎನ್‌ಎಚ್‌ಎಐ ಕಳೆದ ವರ್ಷ ೩೮.೫ ಕೋಟಿ ರೂಪಾಯಿಯಲ್ಲಿ ರಿಪೇರಿ ಕಾರ್ಯವನ್ನು ಪ್ರಾರಂಭಿಸಿತು.