ಪ್ರತಿಭಟನೆ ಬಳಿಕ ರಾಜಕೀಯ ಪ್ರವೇಶಿಸಿದ ರೈತ ಮುಖಂಡರು; ಸಂಯುಕ್ತ ಸಮಾಜ ಮೋರ್ಚಾ ಹೆಸರಿನ ಪಕ್ಷ ಸ್ಥಾಪನೆ

sdfsdfsdf
Published on

ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸಿ, ಯಶಸ್ವಿಯಾಗಿರುವ ರೈತ ಸಂಘಟನೆಗಳು ಈಗ ಹೊಸ ಪಕ್ಷ ಸ್ಥಾಪನೆ ಮಾಡುವ ಮೂಲಕ ರಾಜಕೀಯ ಪ್ರವೇಶ ಮಾಡಿವೆ. ಸಂಯುಕ್ತ ಕಿಸಾನ್ ಮೋರ್ಚಾದಿಂದ ಹೊರ ಬಂದಿರುವ 22 ರೈತ ಸಂಘಟನೆಗಳು ಸಂಯುಕ್ತ ಸಮಾಜ ಮೋರ್ಚಾ ಎಂಬ (ಎಸ್​ಎಸ್​ಎಂ) ಎಂಬ ಪಕ್ಷ ಸ್ಥಾಪಿಸಿವೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಪಕ್ಷ ಸ್ಪರ್ಧೆ ಮಾಡಲು ಯೋಜನೆ ರೂಪಿಸಿದೆ ಎನ್ನಲಾಗುತ್ತದೆ.

ಬಲಬೀರ್ ಸಿಂಗ್ ರಾಜೆವಾಲ್ ಪಕ್ಷದ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಕೃಷಿ ಹೋರಾಟದಲ್ಲಿ ಯಶಸ್ಸು ಗಳಿಸಿದ ನಂತರ ರಾಜಕೀಯ ಪಕ್ಷ ಸ್ಥಾಪನೆ ಮಾಡುವಂತೆ ಜನರು ಒತ್ತಡ ಹೇರುತ್ತಿದ್ದಾರೆ. ಜನರೇ ನಮ್ಮ ಶಕ್ತಿಯಾಗಿದ್ದು, ಅವರ ಆಶಯದಂತೆ ಪಕ್ಷ ಸ್ಥಾಪನೆ ಮಾಡಲಾಗಿದೆ ಎಂದು ರೈತ ನಾಯಕರಾದ ಬಲಬೀರ್ ಸಿಂಗ್ ರಾಜೆವಾಲ್, ಹರ್ವಿುತ್ ಸಿಂಗ್, ಕುಲ್ವಂತ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನಷ್ಟು ರೈತ ಸಂಘಟನೆಗಳು ಪಕ್ಷಕ್ಕೆ ಬೆಂಬಲ ನೀಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ಹಲವರ ವಿರೋಧ: ರೈತ ಸಂಘಟನೆಗಳ ರಾಜಕೀಯ ಪಕ್ಷ ಸ್ಥಾಪನೆ ಹಾಗೂ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ರೈತ ಸಂಘಟನೆಗಳಲ್ಲೇ ವಿರೋಧ ವ್ಯಕ್ತವಾಗಿದೆ. ಎಸ್​ಎಸ್​ಎಂ ನಿರ್ಧಾರಕ್ಕೆ ಅನೇಕ ರೈತ ನಾಯಕರು, ಸಂಘಟನೆಗಳು ಬೆಂಬಲ ಘೋಷಣೆ ಮಾಡಿಲ್ಲ. ತಾನು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ರಾಕೇಶ್ ಟಿಕಾಯತ್ ನೇತೃತ್ವದ ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ಸ್ಪಷ್ಟನೆ ನೀಡಿದೆ.

ಪಂಜಾಬ್, ಉತ್ತರ ಪ್ರದೇಶದಲ್ಲಿ ಪ್ರಭಾವ: ರೈತರು ಹೆಚ್ಚಿನ ಸಂಖ್ಯೆಯಲ್ಲಿರುವ ಪಂಜಾಬ್ ಹಾಗೂ ಉತ್ತರ ಪ್ರದೇಶದ ಚುನಾವಣೆ ಮೇಲೆ ಈ ಬೆಳವಣಿಗೆ ರಾಜಕೀಯ ಪ್ರಭಾವ ಬೀರುವ ಉದ್ದೇಶವಿದೆ. ಕೃಷಿ ಕಾಯ್ದೆ ವಾಪಸ್ ಪಡೆಯುವ ಮೂಲಕ ಬಿಜೆಪಿ ರೈತರ ಮನವೊಲಿಕೆಗೆ ಮುಂದಾಗಿದೆ. ಇದೇ ವೇಳೆ ರೈತರೇ ಪಕ್ಷ ಸ್ಥಾಪನೆ ಮಾಡಿರುವುದು ಮತ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ಸಾಧ್ಯತೆ ಇದೆ.

ಎಎಪಿ ಜತೆ ಮೈತ್ರಿ ಇಲ್ಲ: ಎಸ್​ಎಸ್​ಎಂ ಪಕ್ಷ ಪಂಜಾಬ್ ಚುನಾವಣೆಗೆ ಎಎಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂಬ ವದಂತಿ ವ್ಯಾಪಕವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡರು, ಯಾವುದೇ ರಾಜಕೀಯ ಪಕ್ಷದ ಜತೆ ಮೈತ್ರಿ ಕುರಿತು ಮಾತುಕತೆ ನಡೆದಿಲ್ಲ ಎಂದಿದ್ದಾರೆ.

ಕೃಷಿ ಮಸೂದೆ ಮತ್ತೆ ಮಂಡನೆ?: ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ಮರುಮಂಡನೆ ಮಾಡುವ ಸುಳಿವನ್ನು ನೀಡಿದೆ. ನಾಗಪುರದಲ್ಲಿ ಆಗ್ರೋ ವಿಷನ್ ಎಕ್ಸ್ ಪೋದಲ್ಲಿ ಶುಕ್ರವಾರ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ನಾವು ರೈತರ ಅಭ್ಯುದಯಕ್ಕೆ ಮೂರು ಕಾನೂನುಗಳನ್ನು ತಂದೆವು. ಆದರೆ, ಕೆಲವರು ವಿನಾ ಕಾರಣ ತಗಾದೆ ತೆಗೆದರು. ಸಂಸತ್​ನಲ್ಲಿ ಚರ್ಚೆ ನಡೆದಿಲ್ಲ ಎಂದು ಆರೋಪಿಸಿದರು. ಆದರೆ, ಸರ್ಕಾರ ಈ ವಿಷಯದಲ್ಲಿ ಅಸಮಾಧಾನಗೊಂಡಿಲ್ಲ. ನಾವು ಈಗ ಒಂದು ಹೆಜ್ಜೆ ಹಿಂದೆ ಸರಿದಿರಬಹುದು. ಆದರೆ, ದೇಶದ ಬೆನ್ನೆಲುಬಾದ ರೈತರ ಏಳ್ಗೆಗೆ ನಾವು ಮತ್ತೆ ಮುಂದಡಿ ಇರಿಸುತ್ತೇವೆ. ಮೋದಿ ಸರ್ಕಾರ ಸುಧಾರಣೆಯ ಹಾದಿಯನ್ನು ಬಿಡುವುದಿಲ್ಲ’ಎಂದಿದ್ದಾರೆ.

ಮೂರು ಕೃಷಿ ಕಾಯ್ದೆ ರದ್ದತಿ ಕುರಿತಂತೆ ಎರಡು ದಿನಗಳ ಹಿಂದೆ ‘ವಸ್ತುನಿಷ್ಠತೆ ಮತ್ತು ಕಾರಣಗಳು’ ಎಂಬ ಟಿಪ್ಪಣಿಯನ್ನು ಸರ್ಕಾರ ಸಂಸದರಿಗೆ ಬಿಡುಗಡೆ ಮಾಡಿದೆ. ರೈತರ ಸ್ಥಿತಿಗತಿಗೆ ಅಭಿವೃದ್ಧಿ ಪಡಿಸಲು ಕೈಗೊಂಡ ಕ್ರಮಕ್ಕೆ ಅಡ್ಡಗಾಲು ಹಾಕಿದವರನ್ನು ಇದರಲ್ಲಿ ದೂಷಿಸಲಾಗಿದೆ. ಕೃಷಿ ಕಾನೂನುಗಳ ಅವಶ್ಯಕತೆ ಬಗ್ಗೆ ರೈತರನ್ನು ಜಾಗೃತರನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ. ಈ ಟಿಪ್ಪಣಿಗೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net