

ನಾಗಮಂಗಲ: ಹಳ್ಳಿಗಳಲ್ಲಿ ದೇವಸ್ಥಾನಗಳನ್ನು ಕಟ್ಟುವುದರಿಂದ ಯಾರಿಗೆ ಏನು ಲಾಭ ಎನ್ನುವುದಕ್ಕಿಂತ ಪ್ರತಿಯೊಬ್ಬರ ಮನಸ್ಸಿನಲ್ಲಿ ಎಲ್ಲೂ ಸಿಗಲಾರದ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಜವರನಹಳ್ಳಿ ಗ್ರಾಮದಲ್ಲಿ ಭಾನುವಾರ ನೂತನವಾಗಿ ಪ್ರತಿಷ್ಠಾಪಿಸಿರುವ ಶ್ರೀ ಅರಸಮ್ಮದೇವಿಯ 24ನೇ ದಿನದ ನಿತ್ಯ ಪೂಜಾ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರಲ್ಲಿ ಕೆಲವು ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಅಸಮಾಧಾನ ಉಂಟಾದ ಸಮಯದಲ್ಲಿ ದೇವಸ್ಥಾನಕ್ಕೆ ಬಂದು ಕೆಲ ಸಮಯ ಕಳೆದರೆ ಎಲ್ಲವೂ ಸಮಾಧಾನವಾಗುತ್ತದೆ. ಕಷ್ಟಪಟ್ಟು ನಿರ್ಮಿಸುವ ದೇವಸ್ಥಾನಗಳಲ್ಲಿ ನಿರಂತವಾಗಿ ಪೂಜೆಗಳು ನಡೆದರೆ ಮಾತ್ರ ಊರಿಗೆ ಹಾಗೂ ನಾಡಿಗೆ ಒಳ್ಳೆಯದಾಗುತ್ತದೆ. ಹಾಗಾಗಿ ದೇವಸ್ಥಾನವನ್ನು ಕಟ್ಟುವುದು ಎಷ್ಟು ಮುಖ್ಯವೋ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದೂ ಕೂಡ ಅಷ್ಟೇ ಮುಖ್ಯವಾಗಲಿದೆ ಎಂದರು.
ಡಾ.ಸಿಂಗ್ ಅಗಲಿಕೆ ದೇಶಕ್ಕೆ ನಷ್ಟ: ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ. ಅಮೆರಿಕದಂತಹ ದೊಡ್ಡ ರಾಷ್ಟ್ರವನ್ನೇ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಡಾ.ಮನಮೋಹನ್‌ಸಿಂಗ್ ಅವರಿಗೆ ಸಲ್ಲುತ್ತದೆ. ನಮ್ಮ ದೇಶದಲ್ಲಿಂದು ನಾವೆಲ್ಲರೂ ಸುಭದ್ರವಾಗಿದ್ದೇವೆಂದರೆ ಉತ್ತಮ ಆರ್ಥಿಕ ಸ್ಥಿತಿಯನ್ನು ತಂದು ಕೊಟ್ಟವರು ಡಾ.ಮನಮೋಹನ್ ಸಿಂಗ್. ಅಂತಹ ಮತ್ತೊಬ್ಬ ಶ್ರೇಷ್ಠ ವ್ಯಕ್ತಿ ದೇಶದಲ್ಲಿ ಮತ್ತೆ ಹುಟ್ಟುತ್ತಾರೆಂಬುದು ಕನಸಿನ ಮಾತು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮನಮೋಹನ್‌ಸಿಂಗ್ ಅವರು ಅರ್ಥಶಾಸ್ತ್ರದಲ್ಲಿ ಪರಿಣತಿ ಪಡೆದು ಒಬ್ಬ ಧಕ್ಷ ಅಧಿಕಾರಿಯಾಗಿ, ಕಾರ್ಯದರ್ಶಿಯಾಗಿ ಆರ್‌ಬಿಐ ಗೌವರ್ನರ್ ಆಗಿ, ಸಚಿವರಾಗಿ ನಂತರ ಪ್ರಧಾನಿಯಾಗಿದ್ದು ಇಡೀ ದೇಶ ಖುಷಿ ಪಡುವ ವಿಚಾರ ಎಂದು ಸಿಂಗ್ ಅವರನ್ನು ಬಣ್ಣಿಸಿದರು.
ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರಸ್ವಾಮಿ ಮಾತನಾಡಿ, ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ದೂರದೃಷ್ಟಿಯಿಂದಾಗಿ ಆದಿಚುಂಚನಗಿರಿ ಮಠ ಹಿಮಾಲಯ ಪರ್ವತದಂತೆ ಬೃಹದಾಕಾರವಾಗಿ ಬೆಳೆಯುತ್ತಿದೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಭೈರವೈಕ್ಯ ಶ್ರೀಗಳು ಜವರನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದಲ್ಲಿಯೇ ಸುಸಜ್ಜಿತ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಹುದೊಡ್ಡ ಕೊಡುಗೆ ನೀಡಿ ಹೋಗಿದ್ದಾರೆ. ಭೃಹದಾಕಾರವಾಗಿ ಬೆಳೆದು ನಿಂತಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ಮಲಾನಂದನಾಥ ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಓಡುವ ಕಾಲವನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಾವಿಗೆ ಹೆದರಿ ಓಡುವುದನ್ನು ಬಿಟ್ಟು ಸಾವನ್ನು ಎದರಿಸಬೇಕೆಂದರೆ ನಮ್ಮ ಹೃದಯದಲ್ಲಿ ಧರ್ಮ ಸಂಗ್ರಹವಾಗಬೇಕು. ಇದು ಆಯಿತೆಂದರೆ ನಮ್ಮೊಳಗಿರುವ ಕ್ಲೇಷ ಅಡಗಿ ದ್ವೇಷ ಹೋಗಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಆಗ ಸಾವೂ ಕೂಡ ಹತ್ತಿರ ಬರಲು ಹೆದರುತ್ತದೆ. ಧರ್ಮಸಂಗ್ರಹದ ನಿಟ್ಟಿನಲ್ಲಿ ಬಹುದೊಡ್ಡ ಮೆಟ್ಟಿಲನ್ನು ನಮ್ಮ ಪೂರ್ವಿಕರು ದೇವಸ್ಥಾನದ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ದೇವರನ್ನು ಪೂಜಿಸುವ ನೆಪದಲ್ಲಿ ಎಲ್ಲೆಲ್ಲಿಯೂ ಇರುವ ಪರಮಾತ್ಮನನ್ನು ಸ್ಮರಿಸಬಹುದಾಗಿದೆ ಎಂದರು.
ಜಗತ್ತಿನ ಎಲ್ಲ ದೇಶಗಳಿಗಿಂತ ಅತಿಹೆಚ್ಚು ಆರ್ಥಿಕ ಸಂಪತ್ತು ಹೊಂದಿರುವ ಅಮೆರಿಕ ದೇಶ ಕಳೆದ 2008ರ ಸುಮಾರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುವ ಸಂದರ್ಭವನ್ನು ತಪ್ಪಿಸಿ ಆರ್ಥಿಕ ಸಲಹೆ ಸುಧಾರಣೆ, ನೀತಿ ಮತ್ತು ನಿಯಮಗಳನ್ನು ಒದಗಿಸಿಕೊಟ್ಟವರು ಭಾರತದ ಡಾ.ಮನಮೋಹನ್‌ಸಿಂಗ್ ಎಂದು ಅಂದಿನ ಅಮೆರಿಕ ಅಧಕ್ಷ ಒಬಾಮಾ ಹೇಳುತ್ತಾರೆಂದರೆ ಅವರು ಸಾಮಾನ್ಯವಾಗಿ ಕಾಣುವ ವ್ಯಕ್ತಿಯಲ್ಲ ಎಂದು ಮನಮೋಹನ್‌ಸಿಂಗ್ ಅವರ ಸಾಧನೆಯನ್ನು ಕೊಂಡಾಡಿದರು.
ಇದಕ್ಕೂ ಮುನ್ನ ಅರಸಮ್ಮದೇವಿಯ 24ನೇ ದಿನದ ನಿತ್ಯ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡ ಶ್ರೀಗಳು ಮತ್ತು ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವೇದಿಕೆಗೆ ಆಗಮಿಸುತ್ತಿದ್ದಂತೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿ, ಡಾ.ಮನಮೋಹನ್‌ಸಿಂಗ್ ಮತ್ತು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಗ್ರಾಮದ ನಿವೃತ್ತ ಬಿಇಒ ಜಗದೀಶ್ ಸೇರಿದಂತೆ ಕೆಲವು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದ ಬಳಿಕ ಕಾಯಕಯೋಗಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಧಾರವಾಡದ ಮುರುಘಾಮಠದ ಪೀಠಾಧ್ಯಕ್ಷ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಪೀಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ಕೆ.ಆರ್.ಪೇಟೆ ಶಾಸಕ ಮಂಜು, ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ ಮಾತನಾಡಿದರು.
ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಹೇಮಗಿರಿ ಮತ್ತು ಧಾರವಾಡ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ನಟರಾದ ಶ್ರೀನಾಥ್, ವಿನೋದ್‌ರಾಜ್, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ದಿನೇಶ್ ಇತರರು ಇದ್ದರು.