'ದೆಹಲಿಯಲ್ಲಿ ಶಾಂತಿ ಕಾಪಾಡಿ...ಎಂಥದ್ದೇ ಸಮಯದಲ್ಲೂ ಭ್ರಾತೃತ್ವ ಮರೆಯದಿರಿ..'- ಟ್ವೀಟ್ ಮೂಲಕ ಪ್ರಧಾನಿ ಮನವಿ

Modi 26 Feb 20
Published on

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದಲೂ ಈಶಾನ್ಯ ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಬಣಗಳ ನಡುವೆ ಸಂಘರ್ಷ ಭುಗಿಲೆದ್ದಿದ್ದು, ಹಿಂಸಾಚಾರಕ್ಕೆ ತಲುಪಿದೆ. 20 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿಯೇ ಇತ್ತ ಪ್ರತಿಭಟನಾಕಾರರ ಸಂಘರ್ಷವೂ ಹೆಚ್ಚಿತ್ತು. ನಿನ್ನೆಯವರೆಗೂ ಅಮೆರಿಕ ಅಧ್ಯಕ್ಷರ ಜತೆ ದ್ವಿಪಕ್ಷೀಯ ಮಾತುಕತೆ, ಸಭೆಗಳಲ್ಲಿ ತೊಡಗಿಕೊಂಡಿದ್ದ ಪ್ರಧಾನಿ ಮೋದಿಯವರು ಇಂದು ದೆಹಲಿ ಹಿಂಸಾಚಾರ ಬಗ್ಗೆ ಟ್ವೀಟ್ ಮಾಡಿದ್ದಾರೆ.

ದೆಹಲಿಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗಲಭೆ ಪರಿಸ್ಥಿತಿಯ ಬಗ್ಗೆ ವ್ಯಾಪಕ ಪರಿಶೀಲನೆ. ಶಾಂತಿ ಕಾಪಾಡಲು, ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ದೆಹಲಿ ಪೊಲೀಸರು, ಭದ್ರತಾ ಸಿಬ್ಬಂದಿ ಪ್ರಯತ್ನ ಪಡುತ್ತಿದ್ದಾರೆ.

ನಮ್ಮ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವೇ ಮುಖ್ಯ. ದೆಹಲಿಯ ನನ್ನ ಸಹೋದರ, ಸಹೋದರಿಯರು ದಯವಿಟ್ಟು ಸಹನೆಯಿಂದ ಇರಬೇಕು. ಎಂಥದ್ದೇ ಸಮಯದಲ್ಲೂ ಭ್ರಾತೃತ್ವವನ್ನು ಕಾಪಾಡಬೇಕು. ಆದಷ್ಟು ಶೀಘ್ರವೇ ದೆಹಲಿ ಸಹಜಸ್ಥಿತಿಗೆ ಮರಳುವುದು ತುಂಬ ಮುಖ್ಯ ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net