ಅಕ್ರಮ ಹಣ ವರ್ಗಾವಣೆಯಲ್ಲಿ ಸಿಕ್ಕಿಬಿದ್ದ ಪಿಡಿಒ

Published on

ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಆರೋಪ ಮಾಡಿದ್ದ ಅಧಿಕಾರಿ

ಸೋಮವಾರಪೇಟೆ : ಐಗೂರು ಗ್ರಾಮ ಪಂಚಾಯಿತಿಯಲ್ಲಿ 2021-2022ರ ಸಾಲಿನಿಂದ 2024ರವರೆಗೆ ಸ್ವಂತ ಖಾತೆಗೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಲಕ್ಷಾಂತರ ರೂ. ಅವ್ಯವಹಾರ ಹಿನ್ನೆಲೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಆರೋಪ ಮಾಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಅಕ್ರಮದಲ್ಲಿ ಸಿಕ್ಕಿಬಿದ್ದಿದ್ದಾರೆ.

2024ರಲ್ಲಿ ಅಂದಿನ ಪಿಡಿಒ ಆಗಿದ್ದ ಜಿ.ಬಾಲಕೃಷ್ಣ ಬಂಧಿತ ಅಧಿಕಾರಿ. ಐಗೂರು ಗ್ರಾಮ ಪಂಚಾಯಿತಿಯಲ್ಲಿ 15 ವರ್ಷಗಳಿಂದ ಕ್ಲರ್ಕ್/ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿರುವ ಸರಿತಾ ಅವರು 2022 ರಿಂದ 2023ರ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವೇತನ ಖಾತೆಯಿಂದ ತಮ್ಮ ತಿಂಗಳ ವೇತನವಲ್ಲದೇ ಹೆಚ್ಚುವರಿಯಾಗಿ 15,29,391 ರೂ.ಗಳನ್ನು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿದ್ದ ಬಗ್ಗೆ ಪಿಡಿಒ ಜಿ.ಬಾಲಕೃಷ್ಣ ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರಿತಾ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು.

ಸರಿತಾ ಅವರು ನ್ಯಾಯಾಲದಿಂದ ಜಾಮೀನು ಪಡೆದುಕೊಂಡಿದ್ದರು. ಕಳೆದ ವರ್ಷ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಣಕಾಸು ವಹಿವಾಟಿನ ಬಗ್ಗೆ ಸಮಗ್ರ ವರದಿ ತಯಾರಿಸಿ ಹಣದುರುಪಯೋಗವಾಗಿರುವ ಬಗ್ಗೆ ಉಲ್ಲೇಖಿಸಿ ಜಿಪಂ ಸಿಇಒಗೆ ವರದಿ ಸಲ್ಲಿಸಿದ್ದರು. ಹಣ ದುರುಪಯೋಗಕ್ಕೆ ಅಂದಿನ ಪಿಡಿಒ ಜಿ.ಬಾಲಕೃಷ್ಣ ಅವರ ನಿರ್ಲಕ್ಷವೇ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಒಂದು ವಾರದ ಹಿಂದೆ ಪಿಡಿಒ ಜಿ.ಬಾಲಕೃಷ್ಣ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ, ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ಮುದ್ದು ಮಹದೇವ ತನಿಖೆ ಮುಂದುವರಿಸಿದ್ದಾರೆ. ಪಿಡಿಒ ಬಾಲಕೃಷ್ಣ ವಯೋನಿವೃತ್ತರಾಗಿದ್ದು, ನಿವೃತ್ತರಾದ 6 ತಿಂಗಳ ನಂತರ ಕಾನೂನು ಕ್ರಮಕ್ಕೆ ಒಳಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net