

ಮುಂಬೈ: ಮಹತ್ವಾಕಾಂಕ್ಷೆಯೊಂದಿಗೆ ಷೇರುಪೇಟೆ ಪ್ರವೇಶಿಸಿದ ಪೇಟಿಎಂ, ಚೊಚ್ಚಲ ವಹಿವಾಟಿನಲ್ಲೇ ಬಹುದೊಡ್ಡ ಹೊಡೆತ ತಿಂದಿದೆ. ಮೊದಲ ದಿನದ ವಹಿವಾಟಿನಲ್ಲಿ ಪೇಟಿಎಂ ಷೇರುಮೌಲ್ಯ ಶೇಕಡ 28 ಕುಸಿತ ಕಂಡಿದೆ. 2,150 ರೂಪಾಯಿಗೆ ಐಪಿಒ ಮೂಲಕ ಷೇರು ವಿತರಣೆಯಾಗಿದ್ದು, ಮೊದಲ ದಿನದ ವಹಿವಾಟಿನ ಆರಂಭದಲ್ಲೇ ಶೇಕಡ 9.3 ಕುಸಿದು 1,950 ರೂಪಾಯಿ ಆಗಿತ್ತು. ಬಳಿಕ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡ 28 ಕುಸಿದು 1,560 ರೂಪಾಯಿ ತಲುಪಿತ್ತು. ಷೇರಿನ ವಿತರಣಾ ದರ 2,150 ರೂಪಾಯಿಗೆ ಹೋಲಿಸಿದರೆ ದಿನದ ವಹಿವಾಟಿನ ಕೊನೆಗೆ ಇದು ಶೇಕಡ 27.25 ಅಂಶ ಕುಸಿದು 1,564.15 ರೂಪಾಯಿಯಲ್ಲಿ ವಹಿವಾಟು ಮುಗಿಸಿದೆ. ಇಡೀ ದಿನದ ವಹಿವಾಟಿನಲ್ಲಿ ಒಮ್ಮೆಯೂ ಇದು 2,000 ರೂಪಾಯಿ ಗಡಿ ದಾಟಿಲ್ಲ.
18,000 ಕೋಟಿ ರೂ. ಸಂಗ್ರಹದ ಉದ್ದೇಶದೊಂದಿಗೆ ಐಪಿಒ ವಿತರಿಸಿದ ಪೇಟಿಎಂ ನಿರೀಕ್ಷೆಗೂ ಮೀರಿ ಹೂಡಿಕೆದಾರರಿಂದ ಹಣ ಸಂಗ್ರಹಿಸಿತ್ತು. ಕಂಪನಿಯ ಷೇರಿನ ವಿತರಣಾ ಕ್ರಯದ ಕಾರಣ ಮಾರುಕಟ್ಟೆ ಮೌಲ್ಯ 1.39 ಲಕ್ಷ ಕೋಟಿ ರೂಪಾಯಿ ದಾಟಿತ್ತು. ಮೊದಲ ದಿನದ ಅಪರಾಹ್ನ 2 ಗಂಟೆ ಹೊತ್ತಿಗೆ ಹೂಡಿಕೆದಾರರ 32,000 ಕೋಟಿ ರೂಪಾಯಿ (23%) ಕರಗಿ ಹೋಗಿತ್ತು. ಸಂಜೆ ವೇಳೆಗೆ ಇದು 35,000 ಕೋಟಿ ರೂಪಾಯಿಗೂ ಅಧಿಕ ಆಗಿದೆ. ಇದರೊಂದಿಗೆ ಹತ್ತು ವರ್ಷಗಳ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಐಪಿಒ ಎಂಟ್ರಿಯ ವೇಳೆ ನಷ್ಟ ಅನುಭವಿಸಿದ ಕಂಪನಿ ಎಂಬ ಹಣೆಪಟ್ಟಿಯೂ ಪೇಟಿಎಂ ಪಾಲಾಗಿದೆ.
ಸೆನ್ಸೆಕ್ಸ್, ನಿಫ್ಟಿ ಕುಸಿತ: ಸತತ ಮೂರನೇ ದಿನವೂ ಸೆನ್ಸೆಕ್ಸ್ ಕುಸಿತ ಕಂಡಿದೆ. ಗುರುವಾರದ ವಹಿವಾಟಿನಲ್ಲಿ 372.32 ಅಂಶ (0.62%) ಕುಸಿದು 59,636.01 ಅಂಶದಲ್ಲಿ, ನಿಫ್ಟಿ 133.85 ಅಂಶ (0.75%) ಕುಸಿದು 17,764.80 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ.
ಸದ್ದು ಮಾಡದ ಐಪಿಒಗೆ 15% ಲಾಭ: ಪೇಟಿಎಂನಷ್ಟು ಸದ್ದು ಮಾಡದ ಸಪೈರ್ ಫುಡ್ಸ್ ಕೂಡ ಗುರುವಾರವೇ ಲಿಸ್ಟಿಂಗ್ ಆಗಿದೆ. ಅದರ ಷೇರು ವಿತರಣಾ ಕ್ರಯಕ್ಕಿಂತ ಶೇಕಡ 15ರಷ್ಟು ಏರಿಕೆಯನ್ನು ಮೊದಲ ದಿನದ ವಹಿವಾಟಿನಲ್ಲಿ ದಾಖಲಿಸಿದೆ. ಪಿಜ್ಜಾಹಟ್, ಕೆಎಫ್ಸಿ, ಟಾಕೊ ಬೆಲ್ ಔಟ್ಲೆಟ್ಗಳನ್ನು ನಿರ್ವಹಿಸುತ್ತಿರುವ ಕಂಪನಿ ಇದು. ಸಪೈರ್ ಫುಡ್ಸ್ ಷೇರು ಬಿಎಸ್ಇನಲ್ಲಿ 1360.75 ರೂಪಾಯಿಗೆ, ಎನ್ಎಸ್ಇನಲ್ಲಿ 1,368 ರೂಪಾಯಿಗೆ ಲಿಸ್ಟ್ ಆಗಿದೆ. ಐಪಿಒ ಮೂಲಕ ಇದು 2,073 ಕೋಟಿ ರೂ. ಸಂಗ್ರಹಿಸಿದೆ.