ಪಾರದರ್ಶಕವಾಗಿ ಗುತ್ತಿಗೆದಾರರ ಬಿಲ್ ಪಾವತಿ: ಸಚಿವ ಎನ್.ಎಸ್.ಬೋಸರಾಜು | Burden imposed by the BJP Govt

NSB press meet
Published on

ಬೆಂಗಳೂರು: ಟೆಂಡರ್ ಮೂಲಕ ಇಲಾಖೆ ಕೆಲಸ ನಿರ್ವಹಿಸಿದ ಗುತ್ತಿಗೆದಾರರ ಬಿಲ್ ಪಾವತಿ ಪಾರದರ್ಶಕವಾಗಿದೆ. ಜೇಷ್ಠತೆ ಪಾಲಿಸುವ ಜತೆಗೆ ಹೊಸ ವಿಧಾನದಡಿ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸಮಜಾಯಿಷಿ ನೀಡಿದರು.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಒಟ್ಟು 1566 ಕಾಮಗಾರಿಗಳಿಗೆ ಸಂಪೂರ್ಣ ಬಾಕಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಬಿಲ್ ಪಾವತಿ ವಿಚಾರದಲ್ಲಿ ಆಧಾರರಹಿತ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೊಂದಿಗೆ ದಾಖಲೆಗಳ ಸಹಿತ ಚರ್ಚಿಸಿ, ವಸ್ತುಸ್ಥಿತಿ ವಿವರಿಸಲಾಗಿದೆ. ಬಿಲ್ ಪಾವತಿಯಲ್ಲಿ ತಾರತಮ್ಯ ಅಥವಾ ಹಸ್ತಕ್ಷೇಪದ ಬಗ್ಗೆ ದಾಖಲೆಗಳನ್ನು ಒದಗಿಸಿದರೆ ಕ್ರಮವಹಿಸಲು ಸಿದ್ಧವೆಂದು ಹೇಳಿದರು.

ಹಿಂದಿನ ಸರ್ಕಾರದ ಹೊರೆ

ಸಿದ್ದರಾಮಯ್ಯ ಅವರು ಮೊದಲ ಅಧಿಕಾರಾವಧಿ ಪೂರ್ಣಗೊಳಿಸಿ ಬಿಟ್ಟು ಹೋದಾಗ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿದ್ದ ಬಾಕಿ ಮೊತ್ತ 285 ಕೋಟಿ ರೂ. ಆದರೆ ಹಿಂದಿನ ಬಿಜೆಪಿ ಸರ್ಕಾರ ಹಣಕಾಸಿನ ಲಭ್ಯತೆಯಿಲ್ಲದೆ 12,696 ಕೋಟಿ ರೂ. ಮೊತ್ತದ 15,549 ಕಾಮಗಾರಿಗಳನ್ನು ಮಂಜೂರು ಮಾಡಿ, ಇಲಾಖೆ ಮೇಲೆ ಭಾರ ಹೊರಿಸಿದೆ.

ಅವೈಜ್ಞಾನಿಕವಾಗಿ ಅನುಮತಿ ನೀಡಿದ್ದ ಕಾಮಗಾರಿಗಳನ್ನು ಮುಂದುವರಿಸಲು, ತೊಂದರೆಯಲ್ಲಿದ್ದ ಗುತ್ತಿಗೆದಾರರನ್ನು ಕಾಪಾಡುವುದಕ್ಕಾಗಿ ಎರಡು ಸಾವಿರ ಗುತ್ತಿಗೆದಾರರ ಪೈಕಿ 639 ಗುತ್ತಿಗೆದಾರರಿಗೆ ಬಾಕಿಯಿದ್ದ ಸಂಪೂರ್ಣ, ಉಳಿದ 1361 ಗುತ್ತಿಗೆದಾರರಿಗೆ ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ.

ಜೇಷ್ಠತೆಯೊಂದನ್ನೇ ಅನುಸರಿಸಿದರೆ ದೊಡ್ಡಮೊತ್ತ ಕಾಮಗಾರಿ ನಿರ್ವಹಿಸಿದ 17 ಗುತ್ತಿಗೆದಾರರ ಬಿಲ್ ಪಾವತಿಗೆ ಅನುದಾನ ಪೂರ್ತಿ ವಿನಿಯೋಗವಾಗುತ್ತದೆ. ತೊಂದರೆಯಲ್ಲಿರುವ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ನೆರವಾಗಲು ಹೊಸ ವಿಧಾನ ಪಾರದರ್ಶಕವಾಗಿ ಜಾರಿಗೊಳಿಸಲಾಗಿದೆ ಎಂದು ಎನ್.ಎಸ್.ಬೋಸರಾಜು ತಿಳಿಸಿದರು.

ಹೆಚ್ಚುವರಿ ಅನುದಾನ

ಕಳೆದ ಹಣಕಾಸು ವರ್ಷ (2024-25)ದಲ್ಲಿ 9.97 ಕೋಟಿ ರೂ. ಮೌಲ್ಯದ 13,913 ಮುಂದುವರಿದ ಕಾಮಗಾರಿಗಳು ಚಾಲ್ತಿಯಲ್ಲಿದ್ದವು. ಕಾಮಗಾರಿಗಳ ಅಗಾಧತೆ ಹಾಗೂ ಗುತ್ತಿಗೆದಾರರ ಹಿತಾಸಕ್ತಿ ಕಾಪಾಡಲು ಮಾಡಿಕೊಂಡ ಮನವಿಗೆ ಸಿಎಂ ಸ್ಪಂದಿಸಿ, ಹೆಚ್ಚುವರಿ ಅನುದಾನ ಮಂಜೂರು ಮಾಡಿದರು.

ಫೆಬ್ರವರಿ 2025ಕ್ಕೆ ಬಾಕಿಯಿದ್ದ ಬಿಲ್ ಮೊತ್ತ 3,352.06 ಕೋಟಿ ರೂ. ಒಟ್ಟಾರೆ 3,176 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ 267 ಗುತ್ತಿಗೆದಾರರಿಗೆ ಬಾಕಿಯಿದ್ದ ಹಣವನ್ನು ಸಂಪೂರ್ಣ ಬಿಡುಗಡೆ ಮಾಡಲಾಗಿದೆ.

ಲಭ್ಯವಿದ್ದ ಅನುದಾನದಲ್ಲಿ 2,909 ಕಾಮಗಾರಿಗಳಿಗೆ ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 3,176 ಕಾಮಗಾರಿಗಳಿಗೆ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಿದ್ದು, ಇಲಾಖೆಯಲ್ಲಿ ವಿಶೇಷ ಎಲ್‌ಒಸಿ ಪದ್ಧತಿಯೇ ಇಲ್ಲವೆಂದು ಎನ್.ಎಸ್.ಬೋಸರಾಜು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net