ಹಿರಿಯರಿಗೆ ಗೌರವ ಸಲ್ಲಿಕೆ ಹಿಂದು ಧರ್ಮದ ಸಂಸ್ಕಾರ

book release (1)
ಸಾಗರ ಸಮೀಪ ಇಕ್ಕೇರಿಯಲ್ಲಿ ರಾಮ ಭಟ್ಟ ಅವರ ನೆನಪಿನ ಗ್ರಂಥ ಕಾಯಕ ಯೋಗಿ ಕೃತಿಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ‌್ನಳ್ಳಿ ಬಿಡುಗಡೆಗೊಳಿಸಿದರು. ಗಜಾನನ ಭಟ್ ರೇವಣಕಟ್ಟ, ಡಾ. ಎಂ.ಆರ್.ಹೆಗಡೆ, ಆರ್.ಗೋಪಾಲ ಭಟ್ ಇತರರಿದ್ದರು.
Published on

ಸಾಗರ: ಹಿಂದು ಧರ್ಮದಲ್ಲಿ ಪೂರ್ವಜರಿಗೆ ನೀಡಲಾಗುವ ಗೌರವ ಮತ್ತು ಸಂಸ್ಕಾರ ಇನ್ಯಾವ ಧರ್ಮದಲ್ಲೂ ಕಾಣಲು ಸಿಗುವುದಿಲ್ಲ. ನಮ್ಮ ಸನಾತನ ಸಂಸ್ಕೃತಿ ಬದುಕಿನ ಮಹತ್ವವನ್ನು ಅನಾವರಣಗೊಳಿಸುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ‌್ನಳ್ಳಿ ಹೇಳಿದರು.

ಸಾಗರ ತಾಲೂಕಿನ ಇಕ್ಕೇರಿಯಲ್ಲಿ ಶನಿವಾರ ರಾಮ ಭಟ್ಟರ ನೆನಪಿನ ಗ್ರಂಥ ‘ಕಾಯಕ ಯೋಗಿ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಘೋರೇಶ್ವರ ಸನ್ನಿಧಿಯಲ್ಲಿ ಪೂಜೆ ಮಾಡಿ ತಮ್ಮ ವೃತ್ತಿ ಜತೆಗೆ ಕೃಷಿಯಲ್ಲಿ ತೊಡಗಿಸಿಕೊಂಡು ಕಾಯಕ ಯೋಗಿಯಂತೆ ಶ್ರಮಿಸಿದವರು ರಾಮ ಭಟ್ಟರು ಎಂದು ಹೇಳಿದರು.
ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸಿಕೊಟ್ಟ ರಾಮ ಭಟ್ಟರ ನೆನಪಿನ ಗ್ರಂಥ ‘ಕಾಯಕ ಯೋಗಿ’ಯನ್ನು ಅವರ ಮಕ್ಕಳು ಹಾಗೂ ಕುಟುಂಬದವರು ಲೋಕಕ್ಕೆ ಪರಿಚಯಿಸುತ್ತಿರುವುದು ಶ್ರೇಷ್ಠವಾದ ಕೆಲಸ. ತಮ್ಮ ಪೂರ್ವಜರು ಹಾಗೂ ಹಿರಿಯರು ಮಾಡಿರುವ ಕೆಲಸವನ್ನು ನೆನಪಿಸಿಕೊಳ್ಳುವುದು ಯುವಜನರ ಆದ್ಯ ಕರ್ತವ್ಯ ಎಂದರು.
ಇತ್ತೀಚೆಗೆ ನಗರ ಪ್ರದೇಶಕ್ಕೆ ವಲಸೆ ಹೋಗುವ ಯುವ ಜನತೆ ಗ್ರಾಮಾಂತರ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಹೆತ್ತವರನ್ನೇ ಮರೆಯುತ್ತಿದ್ದಾರೆ. ತಂದೆ, ತಾಯಿಯ ವೃದ್ಧಾಪ್ಯ ಸಮಯದಲ್ಲಿ, ಮರಣ ಕಾಲದಲ್ಲಿ ಹತ್ತಿರ ಇರದೆ ದೂರದ ಊರಿನಲ್ಲಿ, ಹೊರ ದೇಶದಲ್ಲಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಸಂಸ್ಕಾರಯುತ ಜೀವನ ಹಾಗೂ ನಮ್ಮ ಧರ್ಮದ ಸಂದೇಶ ಪಾಲನೆ ಮಾಡುವುದು ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಇಂದು ಧರ್ಮವನ್ನು ಮುನ್ನಡೆಸಬೇಕಾದ ಕೆಲವರು ಅಪಪ್ರಚಾರದಲ್ಲಿ ತೊಡಗಿರುವುದು ದುರ್ದೈವ. ಆದರೆ ನಮ್ಮ ಹಿಂದು ಧರ್ಮ ಶಾಶ್ವತವಾಗಿ ಇರುವಂಥದ್ದು. ಅದು ತಾತ್ವಿಕ ತಳಹದಿ ಮೇಲೆ ನಿಂತಿದೆ. ನಮ್ಮ ಧರ್ಮವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಗ್ರಂಥದ ಕುರಿತು ವಿದ್ವಾನ್ ಗಜಾನನ ಭಟ್ ರೇವಣಕಟ್ಟ ಮಾತನಾಡಿದರು. ಡಾ. ಗಜಾನನ ಶರ್ಮಾ ಹಾಗೂ ಗ್ರಂಥದ ಸಂಪಾದಕ ತಿರುಮಲ ಮಾವಿನಕುಳಿ ಮಾತನಾಡಿದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಡಾ. ಎಂ.ಆರ್.ಹೆಗಡೆ, ಹೈಕೋರ್ಟ್ ವಕೀಲ ಆರ್.ಗೋಪಾಲ ಭಟ್, ನಾಗೇಂದ್ರ ಭಟ್, ಗಜಾನನ ಶರ್ಮ ಹುಕ್ಳು, ಮತ್ತಿಕೊಪ್ಪ ಹರನಾಥ ರಾವ್, ವಕೀಲ ಶ್ರೀಪಾದ್, ಬಿ.ಆರ್.ಜಯಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net