

ಕೋಲಾರ: ಮಹಿಳೆಯರು ಸಹಕಾರಿ ಬ್ಯಾಂಕ್‌ಗಳಿಂದ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕವಾಗಿ ಮರು ಪಾವತಿ ಮಾಡಬೇಕು. ಮರುಪಾವತಿ ವಿಚಾರದಲ್ಲಿ ವದಂತಿಗಳಿಗೆ ಮಹಿಳೆಯರು ಕಿವಿಗೊಡಬೇಡಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಹೇಳಿದರು.
ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದಿಂದ ಶುಕ್ರವಾರ ಸೀಶಕ್ತಿ ಸಂಘಗಳ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಸಾಲ ವಸೂಲಾತಿ ಕುರಿತ ಕಾರ್ಯಾಗಾರದಲ್ಲಿ ಮಹಿಳೆಯರಿಗೆ ಯಶಸ್ವಿನಿ ನೋಂದಣಿ ಪತ್ರ ವಿತರಿಸಿ ಮಾತನಾಡಿದರು.
ಕಡಗಟ್ಟೂರು ಸಹಕಾರ ಸಂಘವು ಆರ್ಥಿಕವಾಗಿ ಸಬಲವಾಗಿದೆ. ಸಂಘದ ಮೂಲಕ ಮಹಿಳಾ ಸಂಘ, ರೈತರಿಗೆ ಮಧ್ಯಮಾವಧಿ ಸಾಲವನ್ನು 30 ಕೋಟಿ ರೂಪಾಯಿಗೂ ಅಧಿಕ ವಿತರಿಸಲಾಗಿದೆ. ಇದನ್ನು ಪಡೆದುಕೊಂಡಿರುವವರು ಸದುದ್ದೇಶಕ್ಕೆ ಬಳಕೆ ಮಾಡಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಿದರೆ ಬಡ್ಡಿ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಸಾಲ ವಿತರಣೆಯಲ್ಲಿ ಕಾನೂನುಗಳು ಬದಲಾವಣೆಯಾಗಿದ್ದು, ಎಂಐಎಸ್ ಯೋಜನೆಯಡಿ ಸಂಘಗಳು ಗ್ರಾಮ ಪಂಚಾಯಿತಿಯಲ್ಲಿ ನೋಂದಣಿಯಾಗಬೇಕು. ಅಂತಹ ಸಂಘಗಳಿಗೆ ಶೇ.5 ನಬಾರ್ಡ್, ಶೇ.7 ಬಡ್ಡಿ ಸರ್ಕಾರ ಪಾವತಿ ಮಾಡುತ್ತದೆ. ನಬಾರ್ಡ್‌ನಿಂದ ಬಿಡುಗಡೆಯಾದ ಕೂಡಲೇ ಸಂಘಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಕೆ.ವಿ.ದಯಾನಂದ್ ಸ್ಪಷ್ಟಪಡಿಸಿದರು.
ಸಂಘದ ಸ್ವಂತ ಬಂಡವಾಳದಿಂದ 2 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಮಹಿಳೆಯರು ನಂಬಿಕೆಯನ್ನು ಉಳಿಸಿಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಪಡೆದುಕೊಂಡಿರುವ ಸಾಲವನ್ನು ಎಷ್ಟು ದಿನವಾದರು ಬಾಕಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ವದಂತಿಗಳಿಗೆ ಕಿವಿಗೊಟ್ಟು ಸಾಲವನ್ನು ಮರುಪಾವತಿ ಮಾಡದಿದ್ದರೆ ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಂಗಾರಪೇಟೆ ತಾಲೂಕಿನಲ್ಲಿ ಯರಗೋಳ್ ಡ್ಯಾಂ ನಿರ್ಮಾಣವಾಗಲು ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ಕಾರಣಕರ್ತರಾಗಿದ್ದು, ಡ್ಯಾಂಗೆ ಕೆಎಸ್‌ಜಿ ಎಂದು ಹೆಸರು ಇಡಬೇಕು ಎಂದು ದಯಾನಂದ್ ಒತ್ತಾಯಿಸಿದರು. ಎಚ್.ಡಿ.ಕುಮಾರಸ್ವಾಮಿ, ಧರ್ಮಸಿಂಗ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸರ್ಕಾರದ ಮೇಲೆ ಒತ್ತಡ ತಂದು ಡ್ಯಾಂ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದರು. ಆನಂತರ ಬದಲಾದ ಅಧಿಕಾರದಿಂದ 10 ವರ್ಷ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಸ್ಥಗಿತಗೊಂಡ ಕಾಮಗಾರಿ ಪೂರ್ಣಗೊಳಿಸಲು ಶ್ರೀನಿವಾಸಗೌಡರೆ ಅಧಿಕಾರಕ್ಕೆ ಬರಬೇಕಾಯಿತು ಎಂದರು.
ಇದೇ ಸಂದರ್ಭದಲ್ಲಿ ಯಶಸ್ವಿನಿ ಹಾಗೂ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಯಿತು.