

ಹೈದರಾಬಾದ್ : ಪವರ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ತೆಲುಗು ನಟ ಪವನ್ ಕಲ್ಯಾಣ್ ಅವರಿಗೆ ಇದೀಗ ಕರೊನಾ ನೆಗೆಟೀವ್ ಬಂದಿದೆ. ಅಲ್ಪಮಟ್ಟದ ಅಸ್ವಸ್ಥತೆಯನ್ನು ಇನ್ನೂ ಅನುಭವಿಸುತ್ತಿದ್ದರೂ, ಪೂರ್ಣ ಚೇತರಿಕೆ ಪಡೆಯುವ ಹಾದಿಯಲ್ಲಿದ್ದಾರೆ ಎಂದು ಅವರ ರಾಜಕೀಯ ಪಕ್ಷವಾದ ಜನಸೇನಾ ಹೇಳಿಕೆ ನೀಡಿದೆ.
ಏಪ್ರಿಲ್ ನಡುವಿನಲ್ಲಿ ತಮ್ಮ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ ಬೆನ್ನಲ್ಲೇ ಪವನ್ ಕಲ್ಯಾಣ್ ಅವರಿಗೂ ಕರೊನಾ ಪಾಸಿಟೀವ್ ಬಂದಿತ್ತು. ಕಲ್ಯಾಣ್ರ ಚಿಕಿತ್ಸೆಗೆ ವೈದ್ಯರ ತಂಡ ಮುಡಿಪಾಗಿತ್ತು. ಖಮ್ಮಂನ ಹೃದ್ರೋಗ ತಜ್ಞರಾದ ಡಾ.ಟಿ.ಸುಮನ್ ಅವರಿಗೆ ಚಿಕಿತ್ಸೆ ನೀಡಲು ಹೈದರಾಬಾದ್ಗೆ ಬಂದಿದ್ದರು. ಅಪೊಲೊ ಆಸ್ಪತ್ರೆಯ ವೈದ್ಯಕೀಯ ತಂಡ ಈ ಅವಧಿಯಲ್ಲಿ ಅವರ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿತ್ತು ಎನ್ನಲಾಗಿದೆ.
ಕಲ್ಯಾಣ್ರ ಸಹೋದರ ನಟ ಚಿರಂಜೀವಿ ಮತ್ತು ಸೋದರಳಿಯ ನಟ ರಾಮ್ ಚರಣ್ ಅವರ ಚಿಕಿತ್ಸೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿದರೆ, ನಿರ್ಮಾಪಕ ನಾಗ ವಂಶಿ ಅವರ ಆರೈಕೆ ಮಾಡಲು ಅವರೊಂದಿಗೆ ಉಳಿದುಕೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)