

ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ಆಶ್ರಯದಲ್ಲಿ ನಗರದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಗರಮಟ್ಟದ ದೇಶಭಕ್ತಿ ಗೀತೆಯ ಸಮೂಹ ಗಾಯನ ಸ್ಪರ್ಧೆಯನ್ನು ಜು.19ರಂದು ಪೇಸ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಖಜಾಂಚಿ ಕೆ.ಇ.ಕಾಂತೇಶ್ ಹೇಳಿದರು.
ತುರ್ತು ಪರಿಸ್ಥಿತಿ ಕರಾಳ ಅಧ್ಯಾಯದ ಸಂಘರ್ಷಮಯ ಹೋರಾಟದ 50 ವರ್ಷಗಳ ನೆನಪಿಗೆ ಸ್ಪರ್ಧೆ ಆಯೋಜಿಸಲಾಗುತ್ತಿದೆ. ವಿಶೇಷವಾಗಿ ತುರ್ತು ಪರಿಸ್ಥಿತಿ ದಿನಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವುದು ಸ್ಪರ್ಧೆ ಉದ್ದೇಶ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.25ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ವಿತರಿಸಲಾಗುವುದು. ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ನೀಡಲಾಗುವುದು. ನಗರದಲ್ಲಿರುವ 36 ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹಾಗೆಯೇ ತುರ್ತು ಪರಿಸ್ಥಿತಿ ಸಮಯದಲ್ಲಿ ಮೀಸಾ ಕಾಯ್ದೆಯಡಿ ಸೆರೆಮನೆ ಶಿಕ್ಷೆ ಅನುಭವಿಸಿದ ಶಿವಮೊಗ್ಗ ನಗರದ ಹಿರಿಯರನ್ನು ಸನ್ಮಾನಿಸಲಾಗುವುದು ಎಂದರು.
ಶ್ರೀಗಂಧ ಸಂಸ್ಥೆಯ ಸಂಚಾಲಕ ವಿನಯ್ ಶಿವಮೊಗ್ಗ ಮಾತನಾಡಿ, ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ಕನಿಷ್ಠ 6 ಹಾಗೂ ಗರಿಷ್ಠ 10 ವಿದ್ಯಾರ್ಥಿಗಳಿರಬೇಕು. ಒಂದು ಕಾಲೇಜಿನಿಂದ ಎರಡು ತಂಡಗಳು ಭಾಗವಹಿಸಬಹುದು. ಸಿನಿಮಾ ಗೀತೆಗಳನ್ನು ಹಾಡುವಂತಿಲ್ಲ ಹಾಗೂ ಕರೋಕೆ ಬಳಸುವಂತಿಲ್ಲ. ದೇಶಭಕ್ತಿ ಗೀತೆಗಳನ್ನು ಮಾತ್ರ ಹಾಡಬೇಕು. ತೀರ್ಪುಗಾರರ ನಿರ್ಣಯ ಅಂತಿಮ. ಹೆಸರು ನೀಡಲು ಜು.14ರಂದು ಕೊನೆಯ ದಿನ ಎಂದರು.
ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳು ಹೆಸರು ನೋಂದಣಿಗೆ ಉಮೇಶ್ ಆರಾಧ್ಯ, ಹರೀಶ್ ಕಾರ್ಣಿಕ್ ಅಥವಾ ವಿನಯ್ ಶಿವಮೊಗ್ಗ ಅವರನ್ನು ಸಂಪರ್ಕಿಸಬೇಕು. ಡಾ. ತೇಜಸ್, ಶ್ರೀಕಾಂತ್ ರಾವ್, ಜೆ.ಆರ್.ವಾಸುದೇವ, ಮೋಹನ್ ಜಾಧವ್, ಎಂ.ಜಿ.ಬಾಲು ಸುದ್ದಿಗೋಷ್ಠಿಯಲ್ಲಿದ್ದರು.