

ವುಹಾನ್: ಚೀನಾದಲ್ಲಿ ಪತ್ತೆಯಾದ ಕರೊನಾ ವೈರಸ್ ಇದೀಗ ಪ್ರಪಂಚದಾದ್ಯಂತ ಹರಡಿದೆ. 118 ದೇಶಗಳಲ್ಲಿ ವೈರಸ್ ಕಾಣಿಸಿಕೊಂಡಿದ್ದು ಪ್ರಪಂಚದ ಜನರು ಭಯಭೀತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಚೀನಾದ ವೈದ್ಯರು ಮತ್ತೊಂದು ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಸದ್ಯ ಪ್ರಪಂಚದಾದ್ಯಂತ ಕರೊನಾ ಪೀಡಿತರನ್ನು ಮತ್ತು ಶಂಕಿತರನ್ನು 14 ದಿನಗಳ ಕಾಲ ಪ್ರತ್ಯೇಕಿಸಿಡಲಾಗುತ್ತಿದೆ. ಕರೊನಾ ವೈರಸ್ 14 ದಿನಗಳ ಕಾಲ ಬೇರೆಯವರಿಗೆ ಹರಡಬಲ್ಲ ಶಕ್ತಿ ಹೊಂದಿರುತ್ತದೆ ಎಂದು ತಿಳಿಸಲಾಗಿದೆ. ಆದರೆ ಕರೊನಾ ಜೀವಿತಾವಧಿ 14 ದಿನಗಳಿಗಿಂತ ಹೆಚ್ಚಿದೆ ಎಂದು ಚೀನಾದ ವೈದ್ಯರು ತಿಳಿಸಿದ್ದಾರೆ. ಈ ವೈರಸ್ 4 ವಾರಗಳ ಕಾಲ (37 ದಿನಗಳು) ಬದುಕಬಲ್ಲದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಸಂಶೋಧನೆ ನಡೆಸಲೆಂದು ಜಿನಿಂಟನ್ ಆಸ್ಪತ್ರೆ ಮತ್ತು ವುಹಾನ್ ಪಲ್ಮನರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 191 ಕರೊನಾ ಸೋಂಕಿತರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಸೋಂಕಿತರಿಗೆ ಸೋಂಕು ತಗುಲಿ 20 ದಿನಗಳಾದ ನಂತರ ಅವರನ್ನು ಪರೀಕ್ಷಿಸಲಾಗಿದೆ. ಆ ಸಮಯದಲ್ಲಿ ಚಿಕಿತ್ಸೆಯಿಂದಾಗಿ ಅವರಲ್ಲಿ ರೋಗಲಕ್ಷಣಗಳಿರಲಿಲ್ಲವಾದರೂ ಅವರಲ್ಲಿ ವೈರಸ್ ಇದ್ದು, ಅದು ಬೇರೆಯವರಿಗೆ ಹರಡಬಲ್ಲದ್ದಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಚಾರ ಲ್ಯಾನ್ಸೆಟ್ನ ವೈದ್ಯಕೀಯ ಜರ್ಬಲ್ನಲ್ಲಿ ಪ್ರಕಟವಾಗಿದೆ.
ಗುಣಮುಖರಾಗಿರುವ ರೋಗಿಗಳ ಉಸಿರಾಟದ ಮಾದರಿಯನ್ನು ತಪಾಸಣೆ ನಡೆಸಿದಾಗ ಅದರಲ್ಲಿ ವೈರಸ್ನ RNA ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಎಲ್ಲಾ ರೋಗಿಗಳಲ್ಲೂ ಈ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಆದರೆ ಮೂರನೇ ಒಂದು ಭಾಗ ರೋಗಿಗಳಲ್ಲಿ ವೈರಸ್ ನಾಲ್ಕು ವಾರಗಳ ಕಾಲ ಉಳಿದರಿಬಲ್ಲದು ಎಂದು ಮಾಹಿತಿ ನೀಡಲಾಗಿದೆ.
ಸದ್ಯ ಕರೊನಾ ವೈರಸ್ ಪ್ರಪಂಚದ 118 ದೇಶಗಳಲ್ಲಿ ಕಾಣಿಸಿಕೊಂಡಿದ್ದು, 1,25,000ಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದಾರೆ. ಭಾರತದಲ್ಲಿ 74 ಜನರಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಕರ್ನಾಟಕದಲ್ಲಿ ಐವರಲ್ಲಿ ಸೋಂಕು ಧೃಡವಾಗಿದ್ದು, ದೇಶದಲ್ಲಿ ವೈರಸ್ನಿಂದಾಗಿ ಮೊದಲ ಸಾವು ರಾಜ್ಯದ ಕಲಬುರಗಿಯಲ್ಲಿ ಸಂಭವಿಸಿದೆ. (ಏಜೆನ್ಸೀಸ್)