ಪೋರ್ಕ್​​ ಸೇವಿಸುವವರು ತಿಳಿದುಕೊಳ್ಳಬೇಕಾದ ವಿಷಯ; ವೈದ್ಯರು ಹಂಚಿಕೊಂಡಿರುವ ಪೋಸ್ಟ್​​ ನೋಡಿದ್ರೆ ತಿಳಿಯುತ್ತೆ ಅಪಾಯಕಾರಿ ಸಂಗತಿ

Untitled-design-3-2
Published on

ವಾಷಿಂಗ್ಟನ್​ ಡಿಸಿ: ಅಮೆರಿಕ ಮೂಲದ ವೈದ್ಯರೊಬ್ಬರು ಬೇಯಿಸದ ಅಥವಾ ಅರ್ಧ ಬೇಯಿಸಿದ ಹಂದಿಮಾಂಸವನ್ನು ಸೇವಿಸುವುದರಿಂದ ಉಂಟಾಗುವ ಅಪಾಯವನ್ನು ತಿಳಿಸಿದ್ದಾರೆ. ಯುನಿವರ್ಸಿಟಿ ಆಫ್​ ಫ್ಲೋರಿಡಾ ಹೆಲ್ತ್​​ ಜಾಕ್ಸನ್​​ವಿಲ್ಲೆಯ ಡಾ.ಸ್ಯಾಮ್​​ಘಾಲಿ ಅವರು ವೈದ್ಯಕೀಯ ತುರ್ತುಸ್ಥಿತಿ ಹಾಗೂ ರೋಗಗಳ ಬಗೆ ಎಲ್ಲರಿಗೂ ತಿಳಿದಿರಲಿ ಎಂಬ ಕಾರಣಕ್ಕೆ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ ಡಾ.ಘಾಲಿ ಸೋಂಕಿನಿಂದ ಬಳಲುತ್ತಿರುವ ರೋಗಿಯೊಬ್ಬರ ಸಿಟಿ ಸ್ಕ್ಯಾನ್​ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯು ಪೋರ್ಕ್​​ ಟೇಪ್​ವರ್ಮ್​​ನ ಲಾರ್ವಾ ಸಿಸ್ಟ್​​ಗಳಿಂದ ನರಳುತ್ತಿದ್ದಾನೆ. ಇದರ ವೈಜ್ಞಾನಿಕ ಹೆಸರು ಟೇನಿಯಾ ಸೋಲಿಯಮ್​ ಎಂದು ವಿವರಿಸಿದ್ದಾರೆ. ಇದು ಬೇಯಿಸದ ಹಂದಿಮಾಂಸದಲ್ಲಿ ಕಂಡುಬರುವ ಸೋಂಕಾಗಿದೆ. ಇದನ್ನು ಸೇವಿಸುವ ಮೂಲಕ ಮನುಷ್ಯರು T. Solium ಸೋಂಕಿಗೆ ಒಳಗಾಗುತ್ತಾರೆ ಎಂದು ವಿವರಿಸಿದ್ದಾರೆ.

ಇದನ್ನು ಸೇವಿಸಿದ 5 ರಿಂದ 12 ವಾರಗಳ ನಂತರ ಈ ಸೋಂಕು ಜೀರ್ಣಾಂಗವ್ಯೂಹದೊಳಗೆ ಪ್ರೌಢವಸ್ಥೆಯ ಟೇಪ್​​ವರ್ಮ್​​ಗಳಾಗಿ ವಿಕಸನಗೊಳ್ಳುತ್ತವೆ. ಇದನ್ನು ಕರುಳಿನ ಟೇನಿಯಾಸಿಸ್​ ಎಂದು ಕರೆಯಲಾಗುತ್ತದೆ. ಕೆಲವರಲ್ಲಿ ಇದು ಮೆದುಳಿಗೆ ಸಾಗಿ ಮೆದುಳಿನ ಅಂಗಾಂಶದಲ್ಲಿ ಟೇಪ್​ವರ್ಮ್​​​ ಅನ್ನು ರಚಿಸುತ್ತದೆ. ಇದರಿಂದ ತಲೆನೋವು ಸೇರಿ ಗಂಭೀರ ನರಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಎಂದು ತಿಳಿಸಿದ್ದಾರೆ.

ಇಂತಹ ಸಮಸ್ಯೆಗಳಿಂದ ಪಾರಾಗಲು ಪದೇಪದೆ ಕೈತೊಳೆದುಕೊಳ್ಳುವ ಮೂಲಕ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮುಖ್ಯವಾಗಿ ಬೇಯಿಸದ ಅಥವಾ ಕಚ್ಚಾ ಪೋರ್ಕ್​​ ಮಾಂಸವನ್ನು ಎಂದಿಗೂ ಸೇವಿಸಬೇಡಿ ಎಂದು ಡಾ.ಘಾಲಿ ಸಲಹೆ ನೀಡಿದ್ದಾರೆ. ರೋಗದ ಬಗ್ಗೆ ಮಾಹಿತಿ ಮತ್ತು ಸಲಹೆ ನೀಡುವುದರ ಜತೆಗೆ ಅದನ್ನು ಗುಣಪಡಿಸಲು ಇರುವ ಚಿಕಿತ್ಸೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈ ರೋಗಕ್ಕೆ ಆಂಟಿ ಪಾರಾಸಿಟಿಕ್ ಥೆರಪಿ, ಸ್ಟೀರಾಯ್ಡ್‌ಗಳು, ಆಂಟಿ-ಎಪಿಲೆಪ್ಟಿಕ್ಸ್ (ನ್ಯೂರೋಸಿಸ್ಟಿಸರ್ಕೋಸಿಸ್) ಈ ಚಿಕಿತ್ಸೆಗಳನ್ನು ಪಡೆಯಬಹುದು ಎಂದು ತಿಳಿಸಿದರು. ಡಾ.ಸ್ಯಾಮ್​ ಘಾಲಿ ಅವರ ಈ ಪೋಸ್ಟ್​​ ಅನ್ನು 6 ಮಿಲಿಯನ್​ ಮಂದಿ ವೀಕ್ಷಿಸಿದ್ದು, 1600ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net