ಸಂತ ನಡೆಯ ಅಜಾತಶತ್ರು ಅಟಲ್...

ಅಟಲ್​ ಬಿಹಾರಿ ವಾಜಪೇಯಿ
ಅಟಲ್​ ಬಿಹಾರಿ ವಾಜಪೇಯಿ
Published on

(ಲೇಖಕರು ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕರು)

ಪಕ್ಷ, ಸಂಘಟನೆ ಮತ್ತು ಕಾರ್ಯಕರ್ತರ ವಿಷಯದಲ್ಲಿ ಅಟಲ್​ಜೀ ಎಂದೂ ಆಡಂಬರ ತೋರಲಿಲ್ಲ. ದೂರದ ಪ್ರಯಾಣಕ್ಕೆ ರಾತ್ರಿ 11, 12 ಗಂಟೆಗಳವರೆಗೂ ರೈಲ್ವೆ ನಿಲ್ದಾಣಗಳಲ್ಲಿ ಕಾಯ್ದು ರೈಲು ಹತ್ತುತ್ತಿದ್ದರು. ಅಷ್ಟೊತ್ತಿನಲ್ಲೂ ಬಳಲಿಕೆಯ ಕುರುಹು ಬಿಟ್ಟುಕೊಡದೇ ಕಾರ್ಯಕರ್ತರೊಡನೆ ಬೆರೆತು ‘ಆನಂದದ ಆಯಾಸ’ ಅನುಭವಿಸುತ್ತಿದ್ದರು. ಸಂಘ ಸಂಸ್ಕಾರದ ನೆರಳಿನಲ್ಲಿ ಬೆಳೆದು ಬಂದ ನನಗೆ ಸಂಘಟನೆ ಹಾಗೂ ಹೋರಾಟ ಜೀವನದ ಅವಿಭಾಜ್ಯ ಅಂಗವೇ ಆಯಿತು.
ರಾಜ್ಯದಲ್ಲಿ ಭದ್ರನೆಲೆಗಾಗಿ ತವಕಿಸುತ್ತಿದ್ದ ರಾಜಕೀಯ ಸಂಘಟನೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬಲಗೊಳಿಸುವ ಮಾರ್ಗಕ್ಕೆ ಚೈತನ್ಯಶಕ್ತಿಯಾಗಿ ನಿಂತವರು ಅಟಲ್ ಬಿಹಾರಿ ವಾಜಪೇಯಿ. ಕವಿ ಹೃದಯದ ಮುಗ್ಧ ಮಗುವಿನ ಮುಖಭಾವದ ಅಟಲ್​ಜೀ ಭಾರತದ ರಾಜಕಾರಣದ ಸಂತ. ಈ ಕಾರಣಕ್ಕಾಗಿಯೇ ಸೈದ್ಧಾಂತಿಕ ಅಭಿಪ್ರಾಯಭೇದವಿದ್ದರೂ ವಿರೋಧ ಪಕ್ಷಗಳಲ್ಲೂ ಮಿತ್ರತ್ವ ಸಂಪಾದಿಸಿ ‘ಅಜಾತಶತ್ರು’ ಎಂದು ಕರೆಸಿಕೊಂಡರು. ನಂಬಿದ ಸಿದ್ಧಾಂತ, ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಭಾರತೀಯ ಜನಸಂಘ ಅಸ್ತಿತ್ವದ ಉದ್ದೇಶವನ್ನು ಸಾರ್ಥಕಗೊಳಿಸಿ, ಬಿಜೆಪಿಯಿಂದ ಮೊಟ್ಟಮೊದಲ ಪ್ರಧಾನಿಯಾಗಿ ಇತಿಹಾಸ ಬರೆದರು. ಲಕ್ಷಾಂತರ ಕಾರ್ಯಕರ್ತರ ದಶಕಗಳ ಹೋರಾಟದ ಕನಸು ನನಸಾಗಿಸುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾಗಿ ನಿಂತರು. ಬಿಜೆಪಿಯ ತತ್ವ, ಸಿದ್ಧಾಂತಗಳನ್ನು ಕೋಟ್ಯಂತರ ಭಾರತೀಯ ಹೃದಯಗಳು ಅಪ್ಪಿಕೊಳ್ಳುವಂತೆ ಮಾಡಿದ ತಪಸ್ವೀ ಸಂಘಟಕ ಅಟಲ್​ಜೀ. ಸ್ವತಃ ಕವಿಯೂ ಆಗಿದ್ದ ಅವರದು ಜನ-ಮನವನ್ನು ಹಿಡಿದಿಟ್ಟುಕೊಳ್ಳುವ ಮಾತಿನ ಮೋಡಿ. ಅದರ ಪರಿಣಾಮವೇ ಬಿಜೆಪಿಯ ಸಾಟಿ ಇಲ್ಲದ ಬೆಳವಣಿಗೆ. 
ಕರ್ನಾಟಕವೆಂದರೆ ಅತೀವ ಪ್ರೀತಿ: ಅವರಿಗೆ ಕರ್ನಾಟಕವೆಂದರೆ ವಿಶೇಷ ಪ್ರೀತಿ. ಬಿಜೆಪಿಗೆ ಬಾಗಿಲು ತೆರೆದು ಕೊಡುವ ಮೊದಲ ರಾಜ್ಯ ಕರ್ನಾಟಕ ಎಂದು ಅವರು ಅಚಲವಾಗಿ ನಂಬಿದ್ದರು. ಅವರ ದಕ್ಷಿಣ ಭಾರತದ ಭೇಟಿಯ ಸಮಯದಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಇರುತ್ತಿತ್ತು. ಹಗಲು-ರಾತ್ರಿ ಎನ್ನದೆ ನಮ್ಮನ್ನು ಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದರು. ಅಂದು ಶೈಶವಾವಸ್ಥೆಯಲ್ಲಿದ್ದ ಸಂಘಟನೆಯನ್ನು ಬೆಳೆಸಿ ನಮ್ಮಂಥವರಲ್ಲಿ ನಾಯಕತ್ವ ದೊಡ್ಡ ಮಟ್ಟದಲ್ಲಿ ಪಡಿಮೂಡಬೇಕೆಂಬ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಸಂಘಟನೆಯ ಬೆಳವಣಿಗೆಗೆ ‘ಚಿಮ್ಮುವ ಹಲಗೆ’ಯಾಗಿ ನಿಂತರು. ಎಂಥ ಕಠಿಣ ಸಂದರ್ಭದಲ್ಲೂ ಸಂಘಟನೆ ಹಾಗೂ ಹೋರಾಟದಲ್ಲಿ ನಾವು ಎಂದೂ ಆಸಕ್ತಿ ಕಳೆದುಕೊಳ್ಳದೆ ನಿರೀಕ್ಷಿತ ಗುರಿ ತಲುಪಲು ಅವರ ಮಾರ್ಗದರ್ಶನ, ಪ್ರೇರಣೆ ಸಾಧ್ಯವಾಗಿಸಿತು.

ಅಟಲ್​ಜೀ ನನ್ನ ಮೇಲೆ ಇರಿಸಿದ್ದ ಪ್ರೀತಿ, ವಿಶ್ವಾಸಗಳಲ್ಲಿ ನಾನು ಮಾತೃವಾತ್ಸಲ್ಯ ಅನುಭವಿಸಿದ್ದೇನೆ. ನನಗೆ ಹಿನ್ನಡೆ ಎದುರಾದಾಗಲೆಲ್ಲ ಮತ್ತೆ ಪುಟಿದೇಳುವ ಸ್ಪೂರ್ತಿ, ಹೋರಾಟದ ಕಿಚ್ಚು ಹಾಗೂ ತಾಳ್ಮೆಯ ನಡೆ ಮೂಡಲು ಅವರೇ ಸದಾ ಮಾದರಿ.

ಹೋರಾಟಕ್ಕೆ ಪ್ರೇರಣೆ: 2007 ಹಾಗೂ 2018ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆರಳೆಣಿಕೆ ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದಾಗ, ಅಟಲ್​ಜೀ ಕೇವಲ 13 ದಿನಗಳ ಪ್ರಧಾನಿಯಾಗಿ 1996ರ ಮೇ 28ರಂದು ರಾಜೀನಾಮೆ ನೀಡುವ ಸಂದರ್ಭದಲ್ಲಿ ಮಾಡಿದ ‘ಐತಿಹಾಸಿಕ ಭಾಷಣ’ ನನ್ನಲ್ಲಿ ಆತ್ಮವಿಶ್ವಾಸದ ಹೋರಾಟಕ್ಕೆ ಛಲ ಮೂಡಿಸಿತು. 2007ರ ನವೆಂಬರ್ 19 ಮತ್ತು 2018ರ ಮೇ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಂದರ್ಭಗಳಲ್ಲಿ ನನ್ನಲ್ಲಿ ಪಕ್ಷವನ್ನು ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಹಾಗೂ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ತಂದುಕೊಡುವ ಶಪಥ ಕೈಗೊಳ್ಳಲು ಅಟಲ್​ಜೀ ಮಾತುಗಳು ಆತ್ಮಬಲದ ಚೈತನ್ಯವಾಗಿದ್ದವು.

ನೂರರಿಂದ ಲಕ್ಷ: ಪಕ್ಷ ಸಂಘಟನೆಯ ಆರಂಭದಲ್ಲಿ ನೂರಿನ್ನೂರು ಜನರನ್ನು ಸೇರಿಸುವುದೂ ಕಷ್ಟವಾಗುತ್ತಿತ್ತು. ಸ್ವತಃ ವಾಜಪೇಯಿ ಬಂದರೂ 2-3 ಸಾವಿರ ಜನ ಭಾಷಣ ಕೇಳಲು ಬರುತ್ತಿದ್ದರು. ಈ ಬಗ್ಗೆ ಅಟಲ್​ಜೀ ಎಂದೂ ಬೇಸರಗೊಳ್ಳಲಿಲ್ಲ; ಬದಲಾಗಿ ನಮ್ಮಲ್ಲಿ ಇನ್ನಷ್ಟು ಉತ್ಸಾಹ ತುಂಬುತ್ತಿದ್ದರು. ಮುಂದೊಮ್ಮೆ, ಹುಬ್ಬಳ್ಳಿಯಲ್ಲಿ ಜೆ.ಎಚ್.ಪಟೇಲರ ನೇತೃತ್ವದ ಜನತಾದಳ ಸರ್ಕಾರದ ವಿರುದ್ಧದ ಜನಾಂದೋಲನದಲ್ಲಿ ಸಮಾವೇಶಗೊಂಡ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನಸಮೂಹವನ್ನು ಕಂಡು ನಿಬ್ಬೆರಗಾಗಿ, ‘ಕರ್ನಾಟಕದ ಭವಿಷ್ಯ ಬೆಳಗಲು ಬಿಜೆಪಿಗೆ ಈ ಜನಪರ ಹೋರಾಟದ ಸಮಾವೇಶ ಮುನ್ನುಡಿ ಬರೆದಿದೆ’ ಎಂದು ಅಟಲ್​ಜೀ ಹೇಳಿದ ಮಾತು ಇಂದಿಗೂ ನನ್ನ ಮನದಲ್ಲಿ ಮಾರ್ದನಿಸುತ್ತಿದೆ. ಸಮಾವೇಶದ ನಂತರ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ನನ್ನನ್ನು ತಬ್ಬಿಕೊಂಡು ಅಟಲ್​ಜೀ ಆನಂದಬಾಷ್ಪ ಸುರಿಸಿದ್ದರು. ಕಾರ್ಯಕರ್ತರ ಬಗ್ಗೆ ಅವರಿಗಿದ್ದ ಕಾಳಜಿಗೆ ಸಾಕ್ಷಿಯಾಗಿ ಘಟನೆಯೊಂದು ನನ್ನ ನೆನಪಿನಲ್ಲಿ ಮಾಸದೇ ಉಳಿದಿದೆ.

1984ರಲ್ಲಿ ಇಂದಿರಾ ಗಾಂಧಿಯವರ ಸಾವಿನ ಅನುಕಂಪದ ಅಲೆಯ ಕಾರಣಕ್ಕಾಗಿ ಚುನಾವಣೆಯಲ್ಲಿ ಸೋಲು ಕಂಡ ಅಟಲ್​ಜೀಯವರ ಪರಾಜಯದ ಸಂಕಟ ಅನುಭವಿಸಲಾರದೆ ಭದ್ರಾವತಿಯ ಅಭಿಮಾನಿ ಕಾರ್ಯಕರ್ತ ಲಕ್ಷ್ಮಿ ನಾರಾಯಣ, ‘ವಾಜಪೇಯಿಯವರಂತಹ ಮೇರುವ್ಯಕ್ತಿಯನ್ನು ಸೋಲಿಸಿದ ಜನರಿರುವ ದೇಶದಲ್ಲಿ ನಾನು ಬದುಕಲಾರೆ’ ಎಂದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಭದ್ರಾವತಿಗೆ ಸ್ವತಃ ಆಗಮಿಸಿ ಲಕ್ಷ್ಮಿನಾರಾಯಣನ ಕುಟುಂಬಕ್ಕೆ ಸಾಂತ್ವನ ಹೇಳಿ ಅವನ ತಂಗಿ-ತಮ್ಮನ ಓದಿನ ಜವಾಬ್ದಾರಿ ಅಟಲ್​ಜೀ ವಹಿಸಿಕೊಂಡಿದ್ದರು.

ಅಟಲ್​ಜಿ ಎಂದೂ ಆಡಂಬರ, ಅದ್ದೂರಿತನ ಹತ್ತಿರ ಸುಳಿಯಗೊಡಲಿಲ್ಲ. ಐಷಾರಾಮಿ ವಾಸ್ತವ್ಯ, ಪ್ರಯಾಣಗಳನ್ನು ನಿರೀಕ್ಷಿಸಿದವರಲ್ಲ. ಅಂದು ನನ್ನ ಬಳಿ ಇದ್ದ ‘ಸಿಕೆಆರ್-45 ಅಂಬಾಸಿಡರ್ ಕಾರ್’ ನಮ್ಮ ಪಕ್ಷದ ಏಕೈಕ ವಾಹನವಾಗಿತ್ತು. ಇದರಲ್ಲೇ ಅಟಲ್​ಜೀ ರಾಜ್ಯಾದ್ಯಂತ ಪ್ರಯಾಣಿಸುತ್ತಿದ್ದರು. ಸರಳ ವಾಸ್ತವ್ಯ ಅಯ್ದುಕೊಳ್ಳುತ್ತಿದ್ದರು. ದೂರದ ಪ್ರಯಾಣಕ್ಕೆ ರೈಲು. ಅವರು ರಾತ್ರಿ 11, 12 ಗಂಟೆವರೆಗೂ ರೈಲ್ವೆ ನಿಲ್ದಾಣದಲ್ಲಿ ಕಾಯ್ದು ರೈಲು ಹತ್ತುತ್ತಿದ್ದರು. ಅಷ್ಟೊತ್ತಿನಲ್ಲೂ ಬಳಲಿಕೆಯ ಕುರುಹು ಬಿಟ್ಟುಕೊಡದೆ ಕಾರ್ಯಕರ್ತರೊಡನೆ ಬೆರೆತು ‘ಆನಂದದ ಆಯಾಸ’ ಅನುಭವಿಸುತ್ತಿದ್ದರು. ಇಂದಿಗೂ ಆಯಾಸ ನನ್ನನ್ನು ರ್ಸ³ಸಬಂದರೆ ಅಟಲ್​ಜೀ ಎಂಬ ಚೈತನ್ಯದ ನೆನಪು ಅದನ್ನು ಬಡಿದೋಡಿಸುತ್ತದೆ.

ಅಟಲ್​ಜೀ ನನ್ನಲ್ಲಿ ಅದೆಷ್ಟು ಮಾತೃ ಮಮಕಾರವಿರಿಸಿಕೊಂಡಿದ್ದರೆಂದರೆ ದೆಹಲಿಗೆ ಹೋದಾಗ ಶಿಷ್ಟಾಚಾರದ ಮಾರ್ಗವಿಲ್ಲದೆ, ನೇರ ಭೇಟಿಗೆ ಅವಕಾಶ ಕಲ್ಪಿಸಿದ್ದರು. ಯಡಿಯೂರಪ್ಪ ಬಂದರೆ ‘ಪಕ್ಷ ಹಾಗೂ ಜನರ ವಿಷಯಗಳನ್ನಷ್ಟೇ ಹೊತ್ತು ತರುತ್ತಾನೆ’ ಎಂಬ ಅದಮ್ಯ ವಿಶ್ವಾಸ ಅವರದ್ದಾಗಿತ್ತು. ಶಿಕಾರಿಪುರದ ನಮ್ಮ ಮನೆಗೆ ಭೇಟಿ ನೀಡಿದ್ದರು. ಅದು ನಮ್ಮ ಕುಟುಂಬಕ್ಕೆ ಎಂದಿಗೂ ಮರೆಯದ ಸವಿಕ್ಷಣಗಳ ಬುತ್ತಿ. 1999ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಾಗ, ‘ನೀನು ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ; ಕೇಂದ್ರ ಸಂಪುಟ ಸೇರಲು ಬಾ’ ಎಂದು ಅಟಲ್​ಜೀ ನೀಡಿದ ಆಹ್ವಾನವನ್ನು ನಾನೆಂದೂ ಮರೆಯಲಾರೆ. ಅಂದು ಅವರ ಆಹ್ವಾನವನ್ನು ವಿನಯದಿಂದ ನಿರಾಕರಿಸಿ, ‘ನನಗೆ ಮಂತ್ರಿ ಪದವಿ ಬೇಡ. ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರಲು ಅವಕಾಶ ಮಾಡಿಕೊಡಿ’ ಎಂದು ವಿನಂತಿಸಿದೆ. ಮಂತ್ರಿ ಪದವಿಗೆ ಬದಲಾಗಿ, ರಾಜಶೇಖರಮೂರ್ತಿಯವರಿಗೆ ಕೊಟ್ಟ ವಚನದಂತೆ ಅವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಸಫಲನಾದೆ.

ಆತ್ಮವಿಶ್ವಾಸದ ಮಾತು: 2004ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅಟಲ್​ಜೀ ಸ್ವಲ್ಪವೂ ಅಸಹನೆ, ಹತಾಶೆ ತೋರ್ಪಡಿಸಿಕೊಳ್ಳದೆ, ‘ನಾವು ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯಕ್ರಮವನ್ನು ಜನರ ಬಳಿ ಕೊಂಡೊಯ್ಯುವಲ್ಲಿ ವಿಫಲರಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ನಾವು ಎದೆಗುಂದದೆ ಪಕ್ಷ ಕಟ್ಟೋಣ’ ಎಂಬ ಅತ್ಮವಿಶ್ವಾಸದ ಮಾತನಾಡಿದ್ದು ಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕೆಂದು ನಾನು ಸಂಕಲ್ಪ ತೊಡಲು ಕಾರಣವಾಯಿತು.

ಬಿಜೆಪಿ-ಅಟಲ್​ಜೀ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ದೇಶದ ಜನತೆ ಅವರನ್ನು ಭಾರತದ ಹೆಮ್ಮೆಯ ಸುಪುತ್ರನೆಂಬ ಅಭಿಮಾನದಿಂದ ನೆನೆಯುತ್ತಾರೆ. ಪ್ರತಿಯೊಂದು ಪಕ್ಷವೂ ಅವರೊಬ್ಬ ರಾಜಕೀಯ ಯೋಗಿ ಎಂದು ಪರಿಗಣಿಸಿ ಅಜಾತಶತ್ರುವಿನ ಸ್ಥಾನ ನೀಡಿವೆ. ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಅವರನ್ನು ‘ಅಚಲ ವಿಶ್ವಾಸದ ಸಂಕೇತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಯಭಾರಿ’ ಎಂದು ಬಣ್ಣಿಸಿವೆ. ‘ಅಟಲ್​ಜೀ ಮತ್ತೊಮ್ಮೆ ಹುಟ್ಟಿ ಬನ್ನಿ, ಭಾರತಾಂಬೆಯ ಬೆಳಗ ಬನ್ನಿ.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net