ಕಡ್ಡಾಯ ಕ್ವಾರಂಟೈನ್​ಗೆ ಹೋಗಲು ನಿರಾಕರಣೆ; ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ

train1
Published on

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಮೊದಲ ರೈಲು ಗುರುವಾರ ಬಂದು ತಲುಪಿತು. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕಡ್ಡಾಯ ಕ್ವಾರಂಟೈನ್​ಗೆ ಕಳುಹಿಸಲು ಅಧಿಕಾರಿಗಳು ಯತ್ನಿಸಿದಾಗ ಪ್ರಯಾಣಿಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.

ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ವೇಟಿಂಗ್​ ರೂಂನಲ್ಲಿ ಸೇರಿಕೊಂಡು ಪ್ರತಿಭಟನೆ ಆರಂಭಿಸಿದರು. ಇದರಿಂದಾಗಿ ಕೆಎಸ್​ಆರ್​ ರೈಲು ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಕರೊನಾಕ್ಕೆ ಸಿದ್ಧವಾಗಿದೆ ಆಯುರ್ವೇದದ 4 ಮದ್ದು; ಕ್ಲಿನಿಕಲ್​ ಪ್ರಯೋಗಕ್ಕೆ ಸಿದ್ಧತೆ

ನವದೆಹಲಿಯಿಂದ ಹೊರಟಿದ್ದ ನವದೆಹಲಿ-ಬೆಂಗಳೂರು ಸೂಪರ್​ಫಾಸ್ಟ್​ ಎಕ್ಸ್​ಪ್ರೆಸ್​ ರೈಲು ಗುರುವಾರ ಬೆಳಗ್ಗ 6 ಗಂಟೆ 40 ನಿಮಿಷಕ್ಕೆ ಕೆಎಸ್​ಆರ್​ ರೈಲು ನಿಲ್ದಾಣ ತಲುಪಬೇಕಿತ್ತು. ಆದರೆ ಬೆಳಗ್ಗೆ 7.18ಕ್ಕೆ ಬಂದು ತಲುಪಿತ್ತು. ಅನಂತಪುರ, ಗುಂತ್ಕಲ್​, ಸಿಕಂದರಾಬಾದ್​, ನಾಗ್ಪುರ, ಭೋಪಾಲ್​ ಮತ್ತು ಝಾನ್ಸಿ ಸೇರಿ ಒಟ್ಟು 1 ಸಾವಿರ ಪ್ರಯಾಣಿಕರು ಆ ರೈಲಿನಲ್ಲಿ ಬೆಂಗಳೂರು ತಲುಪಿದ್ದರು. ಇವರೆಲ್ಲರಿಗೂ ಕಡ್ಡಾಯವಾಗಿ 14 ದಿನ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಹೇಳಿದರು. ಇದು ಅವರನ್ನು ಕೆರಳಿಸಿತು.

ನಿಲ್ದಾಣದಲ್ಲಿದ್ದ ವೇಟಿಂಗ್​ ರೂಂನೊಳಗೆ ಸೇರಿಕೊಂಡ ನೂರಾರು ಪ್ರಯಾಣಿಕರು ಹೊರಬರಲು ನಿರಾಕರಿಸಿ 7 ಗಂಟೆಗೂ ಹೆಚ್ಚುಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರವೂ ಪ್ರಕಟಿಸಿತು ‘ವರ್ಕ್​ ಫ್ರಂ ಹೋಮ್’ ಕರಡು ಮಾರ್ಗಸೂಚಿ

ಆಹಾರ ಮತ್ತು ನೀರು ಇಲ್ಲದೆ ಬೆಂಗಳೂರು ತಲುಪಿರುವ ತಮಗೆ ಮೊದಲೇ ಸಾಂಸ್ಥಿಕ ಕ್ವಾರಂಟೈನ್​ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕಿತ್ತು. ಆದರೆ ಹಾಗೆ ಮಾಡದೆ ಈಗ ಕ್ವಾರಂಟೈನ್​ಗೆ ಹೋಗುವಂತೆ ಕಡ್ಡಾಯಗೊಳಿಸಿದರೆ ಹೇಗೆ ಎಂಬುದು ಪ್ರತಿಭಟನಾಕಾರರ ಪ್ರಶ್ನೆಯಾಗಿತ್ತು.

ಇನ್ನು ಕೆಲವರು ಕ್ವಾರಂಟೈನಲ್ಲಿ ಇರಲು ಹಣ ಕೊಡಬೇಕಾಗುತ್ತದೆ. ಆದರೆ ತಮ್ಮ ಬಳಿ ಹಣ ಇಲ್ಲದ ಕಾರಣ ಕ್ವಾರಂಟೈನ್​ಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ಮನೆಗೆ ಹೋಗಲು ನಮಗೆ ಅವಕಾಶ ಕೊಡಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳಲ್ಲಿ ಉಚಿತ ಕ್ವಾರಂಟೈನ್​ ವ್ಯವಸ್ಥೆ ಇದೆ. ಅಲ್ಲಿಗೆ ಹೋಗುವಂತೆ ಅಧಿಕಾರಿಗಳು ಸೂಚಿಸಿದರು. ಆದರೆ ಅದಕ್ಕೂ ನಿರಾಕರಿಸಿದ ಪ್ರಯಾಣಿಕರು ಮಧ್ಯಾಹ್ನ 2.50ರಲ್ಲೂ ನಿಲ್ದಾಣದಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net