ಹೈದರಾಬಾದ್‌ ವಿಮಾನ ರದ್ದಾಗಿ ಪ್ರಯಾಣಿಕರ ಪರದಾಟ

shimogga airport
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ಸಂಸ್ಥೆ ಸಿಬ್ಬಂದಿಯೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು.
Published on

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶನಿವಾರ ಮಧ್ಯಾಹ್ನ ಹೈದರಾಬಾದ್‌ಗೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನಯಾನ ಸೇವೆ ದಿಢೀರ್ ರದ್ದುಗೊಂಡ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ವಿಮಾನ ರದ್ದುಗೊಂಡ ವಿಷಯ ತಿಳಿದು ಪ್ರಯಾಣಿಕರು ವಿಮಾನಯಾನ ಸಂಸ್ಥೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಚೆನ್ನೈ-ಶಿವಮೊಗ್ಗ-ಹೈದರಾಬಾದ್ ನಡುವೆ ಸಂಚರಿಸುವ ಸ್ಪೈಸ್‌ಜೆಟ್ ವಿಮಾನವು ಶನಿವಾರ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳಬೇಕಿತ್ತು. 72 ಸೀಟುಗಳ ಸಾಮರ್ಥ್ಯದ ವಿಮಾನದಲ್ಲಿ ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳಲು 32 ಮಂದಿ ಸಜ್ಜಾಗಿದ್ದರು.

ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರಿಗೆ ತಾಂತ್ರಿಕ ದೋಷದ ನೆಪವೊಡ್ಡಿ ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳುವ ವಿಮಾನ ಹಾರಾಟ ರದ್ದಾಗಿದೆ ಎಂಬ ಮಾಹಿತಿಯನ್ನು ನಿಲ್ದಾಣದ ಸಿಬ್ಬಂದಿ ನೀಡಿದರು. ಇದರಿಂದ ಕೆರಳಿದ ಪ್ರಯಾಣಿಕರು ವಿಮಾನಯಾನ ಸಂಸ್ಥೆ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. 32 ಪ್ರಯಾಣಿಕರಿಗೂ ಹಣ ವಾಪಸ್ ನೀಡಲಾಯಿತು. ಇತ್ತೀಚೆಗೆ ಶಿವಮೊಗ್ಗದಿಂದ ಚೆನ್ನೈಗೆ ವಿಮಾನ ಹಾರಾಟವನ್ನು ಕೂಡ ರದ್ದುಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net