

ನವದೆಹಲಿ: ಜಪಾನ್ನ ಸಮುದ್ರದಲ್ಲಿ ತಡೆಹಿಡಿಯಲ್ಪಟ್ಟಿರುವ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಹಡಗಿನಲ್ಲಿರುವ ಆರೋಗ್ಯವಂತರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ತೋರಿಸಿದ 11 ಜನರ ಮೊದಲ ತಂಡವನ್ನು ಹಡಗಿನಿಂದ ಶುಕ್ರವಾರ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಡೈಮಂಡ್ ಪ್ರಿನ್ಸಸ್ನಲ್ಲಿರುವ ಭಾರತೀಯರ ಪೈಕಿ ಮತ್ತೊಬ್ಬರಿಗೆ ಶುಕ್ರವಾರ ಸೋಂಕು ಇರುವುದು ಧೃಢಪಟ್ಟಿದ್ದು, ಸೋಂಕುಪೀಡಿತ ಭಾರತೀಯರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ಜಪಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ 218ಕ್ಕೆ ಏರಿದೆ. ಹಡಗಿನಲ್ಲಿ 3,711 ಜನರಿದ್ದು, 138 ಭಾರತೀಯರಿದ್ದಾರೆ.
ಮೃತರ ಸಂಖ್ಯೆ 1400ಕ್ಕೆ ಏರಿಕೆ: ಚೀನಾದಲ್ಲಿ ಕರೊನಾ ವೈರಸ್ಗೆ ಶುಕ್ರವಾರ ಮತ್ತೆ 121 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,400 ಗಡಿ ಸಮೀಪಿಸಿದೆ. ಜತೆಗೆ 5,090 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 63,851 ತಲುಪಿದೆ.
ಡಿಜಿಸಿಎ ಸೂಚನೆ: ಕರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಏರೋಬ್ರಿಡ್ಜ್ ನಿಂದ ಹೊರಬಂದ ತಕ್ಷಣ ಕಡ್ಡಾಯವಾಗಿ ಸ್ಕ್ರೀನಿಂಗ್ ಮೂಲಕ ತಪಾಸಣೆಗೊಳಪಡಿಸಬೇಕು ಎಂದು ಭಾರತೀಯ ನಾಗರಿಕ ವಿಮಾನಯಾನ ಮಾಹನಿರ್ದೇಶನಾಲಯ (ಡಿಜಿಸಿಎ) ಸೂಚಿಸಿದೆ.