ಪ್ರಯಾಣಿಕ ವಾಹನಗಳ ಮಾರಾಟ ಕುಸಿತ

car new
Published on

ನವದೆಹಲಿ: ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟರ್ ಇಂಡಿಯಾ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟದ ಪ್ರಮಾಣ ಮೇ ತಿಂಗಳಲ್ಲಿ ಇಳಿಕೆಯಾಗಿದೆ. ಇದಕ್ಕೆ ಭಾರತ-ಪಾಕಿಸ್ತಾನ ಮಧ್ಯೆ ತಲೆದೋರಿದ್ದ ಉದ್ವಿಗ್ನ ಸ್ಥಿತಿ ಮತ್ತು ಎಂಟ್ರಿ ಲೆವೆಲ್ ಕಾರುಗಳ ಮಾರಾಟ ಕುಸಿತ ಕಾರಣ ಎನ್ನಲಾಗಿದೆ.

ಕಾರು ಉತ್ಪಾದನೆಯಲ್ಲಿ ದೇಶದ ಅತಿ ದೊಡ್ಡ ಕಂಪನಿಯಾದ ಹ್ಯುಂಡೈ ಕಳೆದ ತಿಂಗಳು 1.35 ಲಕ್ಷ ಕಾರುಗಳನ್ನು ತನ್ನ ಡೀಲರ್​ಗಳಿಗೆ ರವಾನಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.44 ಲಕ್ಷ ಕಾರುಗಳನ್ನು ಕಳಿಸಿತ್ತು. ಹಾಗಾಗಿ ಶೇ. 6ರಷ್ಟು ಇಳಿಕೆಯಾದಂತಾಗಿದೆ. ಆಲ್ಟೊ, ಎಸ್​ಪ್ರೆಸ್ಸೊ ಮಾರಾಟ ಪ್ರಮಾಣ 9,902 ಇದ್ದದ್ದು 6,776ಕ್ಕೆ ಇಳಿದಿದೆ. ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್, ವ್ಯಾಗನ್​ಆರ್ ಮಾರಾಟ 68,206 ಇದ್ದದ್ದು 61,502ಕ್ಕೆ ಇಳಿದಿದೆ. ಗ್ರ್ಯಾಂಡ್ ವಿತಾರಾ, ಬ್ರಿಜಾ, ಎರ್ಟಿಗಾ, ಎಕ್ಸ್ ಎಲ್6, ಜಿಮ್ಮಿ ಮಾರಾಟ 54,204 ಇದ್ದದ್ದು 54,899ಕ್ಕೆ ಏರಿದೆ ಎಂದು ಕಂಪನಿಯ ಹಿರಿಯ ಅಧಿಕಾರಿ ಪಾಥೋ ಬ್ಯಾನರ್ಜಿ ತಿಳಿಸಿದ್ದಾರೆ. ಇನ್ನೊಂದೆಡೆ, ಟಾಟಾ ಮೋಟರ್ಸ್ 42,040 ಕಾರುಗಳನ್ನು ಮೇನಲ್ಲಿ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 11ರಷ್ಟು ಇಳಿಕೆಯಾಗಿದೆ. ಆದರೆ ಕೆಲವು ಕಂಪನಿಗಳ ಕಾರುಗಳ ಮಾರಾಟ ಪ್ರಮಾಣ ಏರಿಕೆಯಾಗಿದೆ. ಮಹಿಂದ್ರಾ ಆಂಡ್ ಮಹಿಂದ್ರಾ ಶೇ. 21, ಕಿಯಾ ಇಂಡಿಯಾ ಶೇ. 14, ಟೊಯೊಟಾ ಕಿರ್ಲೇಸ್ಕರ್ ಶೇ. 22 ಹೆಚ್ಚಳ ಸಾಧಿಸಿವೆ.

ದ್ವಿಚಕ್ರವಾಹನ ವಲಯ

ಹೀರೋ ಮೋಟೋಕಾರ್ಪ್​ನ ದ್ವಿಚಕ್ರವಾಹನ ಮಾರಾಟ ಪ್ರಮಾಣ 4.79 ಲಕ್ಷದಿಂದ 4.88 ಲಕ್ಷಕ್ಕೆ ಏರಿದೆ. ಸುಜುಕಿ ಮೋಟರ್​ಸೈಕಲ್ ಇಂಡಿಯಾ ಶೇ. 17ರಷ್ಟು, ಬಜಾಜ್ ಆಟೋ ಶೇ. 0.29, ರಾಯಲ್ ಎನ್​ಫೀಲ್ಡ್ ಶೇ. 19ರಷ್ಟು ವೃದ್ಧಿ ದಾಖಲಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net