ಪ್ರಯಾಣಿಕರ ತಂಗುದಾಣದಲ್ಲಿ 'ಗುಂಬಜ್'​ ತೆರವು ಮಾಡದಿದ್ರೆ ನಾನೇ ಒಡೆದು ಹಾಕ್ತೀನಿ: ಮತ್ತೊಮ್ಮೆ ಎಚ್ಚರಿಕೆ ಕೊಟ್ಟ ಪ್ರತಾಪ್​ ಸಿಂಹ

mysuru bus stand gumbaj
Published on

ಮೈಸೂರು: ನಗರದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ವಿವಾದಕ್ಕೆ ಗುರಿಯಾಗಿದೆ. ತೆರವುಗೊಳಿಸದಿದ್ದರೆ ಒಡೆದು ಹಾಕುವುದಾಗಿ ಸಂಸದ ಪ್ರತಾಪ್​ ಸಿಂಹ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ.

ತಂಗುದಾಣದ ಛಾವಣಿ ಮೇಲೆ ಗುಂಬಜ್​ ಮಾದರಿ ನಿರ್ಮಿಸಲಾಗಿದೆ. ಇದನ್ನು ತೆರವು ಮಾಡಬೇಕು. ಇಲ್ಲವಾದರೆ ಜೆಸಿಬಿ ತೆಗೆದುಕೊಂಡು ಹೋಗಿ ಒಡೆದು ಹಾಕಲಾಗುವುದು ಎಂದು ಸಂಸದ ಪ್ರತಾಪ್​ ಸಿಂಹ ಭಾನುವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಕಿಡಿಕಾರಿದ್ದರು. ಇದರೊಂದಿಗೆ ತಂಗುದಾಣ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಇಂದು(ಮಂಗಳವಾರ) ಕೂಡ ಪ್ರತಾಪ್​ ಸಿಂಹ ಇದೇ ಮಾತನ್ನ ಉಚ್ಛರಿಸಿದ್ದಾರೆ. ಗುಂಬಜ್ ತೆರವಿಗೆ ನಾನು ನೀಡಿದ 2 ದಿನದ ಗಡುವು ಮುಗಿದಿದೆ. ಇನ್ನೂ ಎರಡು ದಿನ ಬಾಕಿ ಇದೆ. ಅಷ್ಟರಲ್ಲಿ ತೆರವು ಮಾಡದಿದ್ದರೆ ನಾನೇ ತೆರವು ಮಾಡುತ್ತೇನೆ ಎಂದು ಎಚ್ಚರಿಸಿದರು.

ತಂಗುದಾಣ ತೆರವು ಮಾಡವುದಿಲ್ಲ. ಅದರ ಮೇಲಿನ ಗುಂಬಜ್ ಮಾತ್ರ ತೆರವು ಮಾಡುತ್ತೇನೆ. ನಾನು ಹೇಳಿಕೆ ಕೊಡುವ ಮುನ್ನ ಬರೀ ಗುಂಬಜ್ ಇತ್ತು. ನಂತರ ರಾತ್ರೋರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು? ಮೈಸೂರು ಅರಮನೆ ಮೇಲಿನ ಗೋಪುರಕ್ಕೂ ಮಸೀದಿ ಮೇಲಿನ ಗುಂಬಜ್​ಗೂ ವ್ಯತ್ಯಾಸ ಇಲ್ವಾ? ಅರಮನೆ ಗೋಪುರಕ್ಕೂ ಗುಂಬಜ್​ಗೂ ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಓದಿಕೊಳ್ಳಿ. ಅರಮನೆ ಗೋಪುರ ಇಂಡೋ- ಸಾರ್ಸೆನಿಕ್ ವಾಸ್ತುಶಿಲ್ಪದ್ದು. ತಂಗುದಾನದ ಮೇಲೆ ಇವರು ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ, ಗುಂಬಜ್ ಕಟ್ಟಿದ್ದನ್ನು ಪ್ರಶ್ನಿಸದಿದ್ದರೆ ಅರ್ಧ ಚಂದ್ರವನ್ನು ಕಟ್ಟಿ ಬಿಡುತ್ತಿದ್ದರು ಎಂದು ಪ್ರತಾಪ್​ ಸಿಂಹ ಕಿಡಿಕಾರಿದರು.

ತಂಗುದಾಣ ಕಟ್ಟಿದ ಗುತ್ತಿಗೆದಾರ, ತನ್ನ ಮೇಲೆ ಬೇಕಾದರೆ ಗುಂಬಜ್- ಮಿನಾರ್ ಕಟ್ಟಿಕೊಳ್ಳಲಿ. ಶಾಸಕ ರಾಮದಾಸ್ ಅವರು ಅರಮನೆ ಮಾದರಿಯಲ್ಲಿ 20 ಬಸ್ ಸ್ಟ್ಯಾಂಡ್ ಕಟ್ಟಲಿ. ನಾನು ಗುಂಬಜ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ರಾಮದಾಸ್ ಅವರು ಮೌನ ವಹಿಸಿದ್ದಾರೆ ಎಂದರೆ ಅದರ ಅರ್ಥ ನನ್ನ ಮಾತಿಗೆ ಅವರ ಸಮ್ಮತಿ ಇದೆ ಅಂತ ಎಂದು ಪ್ರತಾಪ್​ ಸಿಂಹ ಹೇಳಿದರು.

ನಗರದ ನಂಜನಗೂಡು ರಸ್ತೆಯ ಜೆಎಸ್​ಎಸ್​ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಜಂಕ್ಷನ್​ ಬಳಿ ಮತ್ತು ಜೆ.ಪಿ.ನಗರ ಸೇರಿದಂತೆ ಕೃಷ್ಣರಾಜ ಕ್ಷೇತ್ರದಲ್ಲಿ ಗುಂಬಜ್​ ಮಾದರಿಯಲ್ಲಿ ಮೂರು ತಂಗುದಾಣಗಳಿವೆ. ಇದು ಬಿಜೆಪಿ ಶಾಸಕ ಎಸ್​.ಎ.ರಾಮದಾಸ್​ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಇವುಗಳು ರಾತ್ರೋರಾತ್ರಿಯೇನೂ ನಿರ್ಮಾಣವಾಗಿಲ್ಲ. ಆದರೀಗ ವಿವಾದ ಸೃಷ್ಟಿಯಾಗಿರುವುದು ಅಚ್ಚರಿ ಮೂಡಿಸಿದೆ.

ಗುಂಬಜ್​ ಮಾದರಿಯ ಬಸ್​ ನಿಲ್ದಾಣ ಧ್ವಂಸ ಮಾಡುವೆ ಎಂದಿರುವ ಸಂಸದ ಪ್ರತಾಪ ಸಿಂಹರ ಹೇಳಿಕೆಗೆ ಶಾಸಕ ತನ್ವೀರ್​ ಸೇಠ್​ ತಿರುಗೇಟು ನೀಡಿದ್ದಾರೆ. ಗೋಪುರದ ರೀತಿ ಕಾಣುವುದೆಲ್ಲವೂ ಮುಸಲ್ಮಾನರದು ಎನ್ನುವುದಾದರೆ ನಾವು ಏನು ಮಾಡೋದು? ಆ ತಂಗುದಾಣವನ್ನು ಯಾರು ವಿನ್ಯಾಸ ಮಾಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಅದೆಷ್ಟು ಒಡೆದು ಹಾಕ್ತಾರೆ ಒಡೆದು ಹಾಕಲಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net